ದುಬೈ: ನಮ್ಮ ಕೆಎಲ್ ರಾಹುಲ್, ವಾಲ್ ರಾಹುಲ್ ದ್ರಾವಿಡ್ ನಷ್ಟೇ ಕೂಲ್ ಅಂತಿದ್ದಾರೆ ಫ್ಯಾನ್ಸ್. ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆಲುವಿನ ಬಳಿಕ ರಾಹುಲ್ ಬಗ್ಗೆ ಅಭಿಮಾನಿಗಳ ಅಭಿಮಾನ ಇನ್ನಷ್ಟು ಹೆಚ್ಚಾಗಿದೆ.
2023 ರ ಏಕದಿನ ವಿಶ್ವಕಪ್ ಫೈನಲ್ ನಲ್ಲೂ ತಂಡಕ್ಕೆ ಅಗತ್ಯವಿದ್ದಾಗ ಕೆಎಲ್ ರಾಹುಲ್ ನಿಂತು ತಾಳ್ಮೆಯ ಆಟವಾಡಿದ್ದರು. ಆದರೆ ಆಗ ಪಂದ್ಯ ಸೋತಿದ್ದಕ್ಕೆ ರಾಹುಲ್ ರನ್ನೇ ಹೊಣೆ ಮಾಡಲಾಯಿತು. ತಮ್ಮದಲ್ಲದ ತಪ್ಪನ್ನು ಅವರು ಹೆಗಲ ಮೇಲೆ ಹೊತ್ತು ನಡೆದರು. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸ್ವಾರ್ಥಿ, ಅಯೋಗ್ಯ ಎಂದೆಲ್ಲಾ ಅದೆಷ್ಟು ಬಾರಿ ಟ್ರೋಲ್ ಮಾಡಿಸಿಕೊಂಡರೋ.
ಅದೆಲ್ಲವನ್ನೂ ಅವರು ಮೌನವಾಗಿ ಸಹಿಸಿಕೊಂಡರು. ತಂಡದಲ್ಲೂ ಅವರಿಗೆ ಸ್ಥಿರವಾದ ಬ್ಯಾಟಿಂಗ್ ಕ್ರಮಾಂಕವಿಲ್ಲ. ಸ್ಥಾನದ ಬಗ್ಗೆ ಭದ್ರತೆಯಿಲ್ಲ. ಅಪ್ಪಟ ವರ್ಲ್ಡ್ ಕ್ಲಾಸ್ ಬ್ಯಾಟಿಂಗ್ ಶೈಲಿ ಹೊಂದಿದ್ದರೂ ರಾಹುಲ್ ಗೆ ತಂಡದಲ್ಲಿ ಸ್ಥಾನ ಖಾತ್ರಿಯಿರಲಿಲ್ಲ.
ಓಪನರ್ ಆಗು ಎಂದರೆ ಓಪನರ್ ಆದರು, ನಾಲ್ಕನೇ ಕ್ರಮಾಂಕ, ಐದನೇ ಕ್ರಮಾಂಕಕ್ಕೂ ಸೈ ಎನಿಸಿದರು. ವಿಶ್ವದರ್ಜೆಯ ಆಟಗಾರನಾಗಿದ್ದರೂ ಆರನೇ ಕ್ರಮಾಂಕದಲ್ಲೂ ಆಡುವ ಪರಿಸ್ಥಿತಿ ಬಂತು. ವಿಕೆಟ್ ಕೀಪಿಂಗ್ ಗೂ ಸೈ ಎಂದರು.
ಆದರೆ ಯಾವುದಕ್ಕೂ ಸೊಲ್ಲೆತ್ತಲಿಲ್ಲ. ತಂಡಕ್ಕಾಗಿ ಯಾವ ಸ್ಥಾನ ಆದರೂ ಸರಿ ಎಂದರು. ಅವರ ಈ ತಾಳ್ಮೆಯ ಕಾರಣಕ್ಕೇ ಕೆಲವೇ ದಿನಗಳ ಮೊದಲು ಕಾಮೆಂಟೇಟರ್ ಹರ್ಷಾ ಭೋಗ್ಲೆ ಕರ್ನಾಟಕದಿಂದ ಬಂದ ಇಬ್ಬರೂ ರಾಹುಲ್ ಗಳೂ ತಂಡಕ್ಕಾಗಿ ಆಡಿದರು ಎಂದಿದ್ದರು. 11 ವರ್ಷಗಳ ಕೆರಿಯರ್ ನಲ್ಲಿ ಇದು ಅವರ ಮೊದಲನೇ ಐಸಿಸಿ ಪ್ರಶಸ್ತಿ ಎನ್ನುವುದು ವಿಶೇಷ. ಗೆದ್ದ ಮೇಲೂ ನನ್ನಿಂದ ಆಗಿದೆ ಎಂಬ ಸಣ್ಣ ಅಹಂ ಕೂಡಾ ಅವರ ಮುಖದಲ್ಲಿರಲಿಲಲ್. ಇದೇ ಕಾರಣಕ್ಕೆ ಫ್ಯಾನ್ಸ್ ಈಗ ನಮ್ಮ ರಾಹುಲ್, ವಾಲ್ ದ್ರಾವಿಡ್ ನಷ್ಟೇ ಕೂಲ್ ಅಂತಿದ್ದಾರೆ.