ದುಬೈ: ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ಆರಂಭಿಕರಾಗಿ ಕಣಕ್ಕಿಳಿದು ವಿರಾಟ್ ಕೊಹ್ಲಿ ಶತಕ ಗಳಿಸಿದ ಬೆನ್ನಲ್ಲೇ ಅವರು ಟೀಂ ಇಂಡಿಯಾ ಟಿ20 ಪಂದ್ಯಗಳಲ್ಲಿ ಆರಂಭಿಕರಾಗಬೇಕೆಂಬ ಒತ್ತಾಯ ಮತ್ತೆ ಶುರುವಾಗಿದೆ.
ನಿನ್ನೆ ಪಂದ್ಯದ ಬಳಿಕ ಕೆಎಲ್ ರಾಹುಲ್ ಮಾಧ‍್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದಾಗ ಅವರಿಗೂ ಪತ್ರಕರ್ತರೊಬ್ಬರು ಇದೇ ಪ್ರಶ್ನೆ ಕೇಳಿದ್ದಾರೆ. ಕೊಹ್ಲಿ ಆರಂಭಿಕರಾಗಬೇಕು ಎಂದು ನಿಮಗನಿಸುತ್ತಾ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದು ಕೆಎಲ್ ರಾಹುಲ್ ರನ್ನು ಕೆರಳಿಸಿತು.
ರೋಹಿತ್ ತಂಡಕ್ಕೆ ಬಂದರೆ ಅವರ ಜೊತೆ ರಾಹುಲ್ ಆರಂಭಿಕರಾಗುತ್ತಾರೆ. ಆದರೆ ಅದೇ ರಾಹುಲ್ ಗೆ ಇಂತಹ ಪ್ರಶ್ನೆ ಎದುರಾದಾಗ ತಕ್ಕ ತಿರುಗೇಟು ನೀಡಿದ ಅವರು ಹಾಗಿದ್ದರೆ ನಾನು ಏನು ಮಾಡಬೇಕು ಎಂಬುದು ನಿಮ್ಮ ಅಭಿಪ್ರಾಯ? ತಂಡದಿಂದ ಹೊರಗೆ ಹೋಗಬೇಕಾ? ಎಂದು ಕಿಡಿ ಕಾರಿದ್ದಾರೆ. ಬಳಿಕ ಮುಂದುವರಿಸಿದ ಅವರು ಕೊಹ್ಲಿ ಕೇವಲ ಆರಂಭಿಕರಾಗಿ ಮಾತ್ರವಲ್ಲ, ಮೂರನೇ ಕ್ರಮಾಂಕದಲ್ಲಿ ಆಡಿದರೂ ಶತಕ ಗಳಿಸಬಲ್ಲರು. ಈವತ್ತು ಅವರು ಆರಂಭಿಕನ ಪಾತ್ರ ನಿಭಾಯಿಸಬೇಕಿತ್ತು. ಅದನ್ನು ಅವರು ಚೆನ್ನಾಗಿ ನಿಭಾಯಿಸಿದರು. ಮುಂದಿನ ಪಂದ್ಯಗಳಲ್ಲಿ ಸಂದರ್ಭಕ್ಕೆ ತಕ್ಕ ಹಾಗೆ ಯಾವ ಕ್ರಮಾಂಕದಲ್ಲಿ ಆಡಬೇಕೋ ಅಲ್ಲಿ ಆಡುತ್ತಾರೆ ಎಂದು ರಾಹುಲ್ ವಿವರಿಸಿದ್ದಾರೆ.