Publish Date: Tue, 13 Feb 2024 (15:52 IST)
Updated Date: Tue, 13 Feb 2024 (15:54 IST)
ಮುಂಬೈ: ಮಾನಸಿಕ ಬಳಲಿಕೆ ಕಾರಣ ನೀಡಿ ಇಷ್ಟು ದಿನ ಕ್ರಿಕೆಟ್ ನಿಂದ ದೂರವಿದ್ದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಕ್ರಿಕೆಟಿಗ ಇಶಾನ್ ಕಿಶನ್ ಇದೀಗ ಕ್ರಿಕೆಟ್ ಗೆ ಮರಳಲು ಸಿದ್ಧರಾಗಿದ್ದಾರೆ.
ಇಶಾನ್ ಕಿಶನ್ ಮುಂಬೈನಲ್ಲಿ ನಡೆಯಲಿರುವ ಡಿವೈ ಪಾಟೀಲ್ ಟೂರ್ನಮೆಂಟ್ ನಲ್ಲಿ ಆಡಲಿದ್ದಾರೆ ಎಂಬ ಮಾಹಿತಿಯಿದೆ. ಈ ಮೂಲಕ ಮತ್ತೆ ಸಕ್ರಿಯ ಕ್ರಿಕೆಟ್ ಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಇಶಾನ್ ತಮ್ಮ ಐಪಿಎಲ್ ನಾಯಕ ಹಾರ್ದಿಕ್ ಪಾಂಡ್ಯ ಜೊತೆ ಅಭ್ಯಾಸ ನಡೆಸುತ್ತಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ದ.ಆಫ್ರಿಕಾ ಟೆಸ್ಟ್ ಸರಣಿಗೆ ಆಯ್ಕೆಯಾದ ಬಳಿಕ ಕೊನೆಯ ಕ್ಷಣದಲ್ಲಿ ಮಾನಸಿಕವಾಗಿ ಬಳಲಿರುವುದಾಗಿ ಕಾರಣ ನೀಡಿ ತಂಡದಿಂದ ಹೊರನಡೆದಿದ್ದ ಇಶಾನ್ ಕಿಶನ್ ಗೆ ಕೋಚ್ ದ್ರಾವಿಡ್ ರಣಜಿ ಟ್ರೋಫಿ ಆಡಿ ಫಿಟ್ನೆಸ್ ಸಾಬೀತುಪಡಿಸಲು ಸೂಚಿಸಿದ್ದರು. ಆದರೆ ಇದುವರೆಗೆ ಇಶಾನ್ ರಣಜಿ ಆಡದೇ ಮ್ಯಾನೇಜ್ ಮೆಂಟ್ ಸೂಚನೆಯನ್ನು ಕಡೆಗಣಿಸಿದ್ದರು. ಇದರಿಂದಾಗಿ ಇಶಾನ್ ಮೇಲೆ ಬಿಸಿಸಿಐ ಗರಂ ಆಗಿತ್ತು. ಇದೇ ಕಾರಣಕ್ಕೆ ಅವರನ್ನು ಇದೀಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.
ಹಾರ್ದಿಕ್ ಪಾಂಡ್ಯ ಜೊತೆ ಅಭ್ಯಾಸ ನಡೆಸುವುದನ್ನು ನೋಡಿ ಇಶಾನ್ ಸದ್ಯಕ್ಕೆ ಟೀಂ ಇಂಡಿಯಾಗೆ ಮರಳುವ ಇರಾದೆಯೇ ಹೊಂದಿಲ್ಲ ಎಂಬ ಮಾತಿತ್ತು. ರಾಷ್ಟ್ರೀಯ ತಂಡವನ್ನು ಕಡೆಗಣಿಸಿ ಐಪಿಎಲ್ ಗೆ ಪ್ರಾಶಸ್ತ್ಯ ನೀಡುವ ಆಟಗಾರರಿಗೆ ಖಡಕ್ ಸಂದೇಶ ಕೊಡಲು ಬಿಸಿಸಿಐ ತಯಾರಿ ನಡೆಸಿತ್ತು. ಇದರ ಬೆನ್ನಲ್ಲೇ ಇಶಾನ್ ಡಿವೈ ಪಾಟೀಲ್ ಟೂರ್ನಿ ಆಡಲು ಸಿದ್ಧರಾಗಿದ್ದಾರೆ.