ಮುಂಬೈ: ಇಂಗ್ಲೆಂಡ್ ವಿರುದ್ಧ ಮೂರನೆಯ ಟೆಸ್ಟ್ ಪಂದ್ಯದಿಂದ ಅನ್ ಫಿಟ್ ಆಗಿರುವ ಕಾರಣ ಹೊರಗುಳಿದಿರುವ ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ಮೇಲೆ ಬಿಸಿಸಿಐ ಅಧಿಕಾರಿಗಳು ಸಿಟ್ಟಾಗಿದ್ದಾರೆ.
ರಾಹುಲ್ ಫಿಟ್ನೆಸ್ ವರದಿ ಹೊರಬರುವ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ತಾವು ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಪ್ರಕಟಿಸಿದ್ದರು. ಇದು ಬಿಸಿಸಿಐ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನೂ ವೈದ್ಯಕೀಯ ವರದಿ ಹೊರಬರುವ ಮೊದಲೇ ಬ್ಯಾಟಿಂಗ್ ಮಾಡುವ ವಿಡಿಯೋ ಪ್ರಕಟಿಸಿ ಈ ಬ್ಯಾಟಿಗರು ಏನು ಸಂದೇಶ ರವಾನಿಸುತ್ತಿದ್ದಾರೆ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಕೆಎಲ್ ರಾಹುಲ್ ಬ್ಯಾಟಿಂಗ್ ವಿಡಿಯೋ ನೋಡಿದ ಮೇಲೆ ಅಭಿಮಾನಿಗಳು ಅವರು ಮೂರನೇ ಟೆಸ್ಟ್ ಪಂದ್ಯಕ್ಕೆ ಪುನರಾಗಮನ ಮಾಡಲಿದ್ದಾರೆ ಎಂದೇ ಅಂದುಕೊಂಡಿದ್ದರು. ಆದರೆ ಅದಾದ ಬಳಿಕವಷ್ಟೇ ಬಿಸಿಸಿಐ ವೈದ್ಯಕೀಯ ತಂಡದ ವರದಿ ಕೈ ಸೇರಿದ್ದು, ರಾಹುಲ್ ಆಡಲು ಅನ್ ಫಿಟ್ ಎಂದು ವೈದ್ಯಕೀಯ ತಂಡ ಘೋಷಿಸಿದೆ.
ಹೀಗಾಗಿ ರಾಹುಲ್ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಿದೆ. ವೈದ್ಯರು, ತಜ್ಞರ ತಂಡ ಘೋಷಿಸುವ ಮೊದಲೇ ತಾವೇ ಫಿಟ್ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳುವುದು ಉತ್ತಮ ಬೆಳವಣಿಗೆಯಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಗರಂ ಆಗಿದ್ದಾರೆ.