Publish Date: Fri, 09 Feb 2024 (08:59 IST)
Updated Date: Fri, 09 Feb 2024 (09:03 IST)
ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ಇದೀಗ ಹಾರ್ದಿಕ್ ಪಾಂಡ್ಯ ಜೊತೆ ಅಭ್ಯಾಸ ನಡೆಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಟೀಂ ಇಂಡಿಯಾ ಕಿರು ಮಾದರಿಯಲ್ಲಿ ಜಿತೇಶ್ ಶರ್ಮಾಗೆ ವಿಕೆಟ್ ಕೀಪಿಂಗ್ ಹೊಣೆ ಕೊಟ್ಟಿದ್ದು ಇಶಾನ್ ಮುನಿಸಿಗೆ ಕಾರಣ ಎನ್ನಲಾಗಿದೆ. ಇದೇ ಕಾರಣಕ್ಕೇ ಅವರು ದ.ಆಫ್ರಿಕಾ ಸರಣಿಯಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದರು. ಅಷ್ಟೇ ಅಲ್ಲ ಕೋಚ್ ದ್ರಾವಿಡ್ ರಣಜಿ ಟ್ರೋಫಿ ಆಡಿ ಫಿಟ್ನೆಸ್ ಸಾಬೀತುಪಡಿಸಿದರೆ ತಂಡಕ್ಕೆ ಪರಿಗಣಿಸಬಹುದು ಎಂದರೂ ಕ್ಯಾರೇ ಎಂದಿಲ್ಲ.
ಇದೂ ಸಾಲದೆಂಬಂತೆ ಇದೀಗ ತಮ್ಮ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಜೊತೆ ಅಭ್ಯಾಸ ನಡೆಸಿದ್ದು ಕಂಡುಬಂದಿದೆ. ಆ ಮೂಲಕ ಇಶಾನ್ ತಾನು ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡುವ ಇರಾದೆ ಇಲ್ಲ. ಐಪಿಎಲ್ ಗೆ ತಯಾರಿ ನಡೆಸುತ್ತಿರುವ ಸೂಚನೆ ನೀಡಿದ್ದಾರೆ. ಇದೀಗ ಭಾರೀ ಟೀಕೆಗೊಳಗಾಗಿದೆ.
ರಾಷ್ಟ್ರೀಯ ತಂಡಕ್ಕಾಗಿ ಆಡುವುದು ಎಷ್ಟೋ ಕ್ರಿಕೆಟಿಗರ ಕನಸು. ಆದರೆ ಇಶಾನ್ ರಾಷ್ಟ್ರೀಯ ತಂಡವನ್ನು ಕಡೆಗಣಿಸಿ ಐಪಿಎಲ್ ತಂಡಕ್ಕೆ ಮಣೆ ಹಾಕಿರುವುದು ಹಲವರ ಟೀಕೆಗೆ ಗುರಿಯಾಗಿದೆ. ಮತ್ತೆ ಕೆಲವರು ತಂಡದಲ್ಲಿ ಪ್ರತಿಭೆಯಿದ್ದೂ ಅವಕಾಶ ಕೊಡದೇ ಇದ್ದರೆ ಏನು ಮಾಡಬೇಕು. ತಂಡದ ರಾಜಕೀಯದಿಂದ ಬೇಸತ್ತೇ ಇಶಾನ್ ಇಂತಹ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.