ಮುಂಬೈ: ಐಪಿಎಲ್ 2025 ರ ನಿನ್ನೆಯ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ವರ್ತನೆಗೆ ಸೂರ್ಯಕುಮಾರ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮುಂಬೈ ಇಂಡಿಯನ್ಸ್ ನಿನ್ನೆಯ ಪಂದ್ಯವನ್ನು 12 ರನ್ ಗಳಿಂದ ಸೋತಿತ್ತು. ಮುಂಬೈ ಬ್ಯಾಟಿಂಗ್ ವೇಳೆ 19 ನೇ ಓವರ್ ನಲ್ಲಿ ತಿಲಕ್ ವರ್ಮ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದುದು ನಾಯಕ ಹಾರ್ದಿಕ್ ಸಿಟ್ಟಿಗೆ ಕಾರಣವಾಯಿತು. ಆಗ ತಿಲಕ್ 23 ಎಸೆತಗಳಿಂದ 25 ರನ್ ಗಳಿಸಿದ್ದರು.
ಈ ವೇಳೆ ತಿಲಕ್ ಗೆ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಗೆ ಮರಳುವಂತೆ ಹಾರ್ದಿಕ್ ಸೂಚಿಸಿದರು. ಅದರಂತೆ ತಿಲಕ್ ಮರು ಮಾತನಾಡದೇ ಪೆವಿಲಿಯನ್ ಗೆ ಮರಳಿದ್ದಾರೆ. ಹಾಗಿದ್ದರೂ ಈ ಪಂದ್ಯವನ್ನು ಮುಂಬೈ ಸೋತಿತು.
ತಿಲಕ್ ವರ್ಮರನ್ನು ಇದ್ದಕ್ಕಿದ್ದಂತೆ ಪೆವಿಲಿಯನ್ ಗೆ ಕಳುಹಿಸಿದ್ದಕ್ಕೆ ಡಗ್ ಔಟ್ ನಲ್ಲಿ ಕೂತಿದ್ದ ಸೂರ್ಯಕುಮಾರ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದರು. ಆಗ ಹತ್ತಿರ ಬಂದ ಕೋಚ್ ಮಹೇಲ ಜಯವರ್ಧನೆ ಬಂದು ಸಮಾಧಾನಪಡಿಸಿದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.