ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾದ ಮೇಲೆ ಹಾರ್ದಿಕ್ ಪಾಂಡ್ಯ ಎಲ್ಲೇ ಹೋದರೂ ಪ್ರೇಕ್ಷಕರು ಅವರನ್ನು ಗೇಲಿ ಮಾಡುತ್ತಲೇ ಇದ್ದಾರೆ.
ರೋಹಿತ್ ಶರ್ಮಾರಿಂದ ನಾಯಕತ್ವ ಕಿತ್ತುಕೊಂಡರು ಎಂದು ಅವರ ಮೇಲೆ ಅಭಿಮಾನಿಗಳಿಗೆ ಕೋಪವಿದೆ. ಸಾಲದ್ದಕ್ಕೆ ಮುಂಬೈ ಆರಂಭಿಕ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿತ್ತು. ಹೀಗಾಗಿ ಹಾರ್ದಿಕ್ ಎಲ್ಲೇ ಹೋದರೂ ಅಭಿಮಾನಿಗಳು ಗೇಲಿ ಮಾಡುತ್ತಿದ್ದರು.
ಇದು ಆರ್ ಸಿಬಿ ವಿರುದ್ಧದ ನಿನ್ನೆಯ ಪಂದ್ಯದಲ್ಲೂ ಮುಂದುವರಿದಿದೆ. ಹಾರ್ದಿಕ್ ಬ್ಯಾಟಿಂಗ್ ಮಾಡುತ್ತಿದ್ದಾಗ ಪ್ರೇಕ್ಷಕರು ಮೂದಲಿಸುತ್ತಿದ್ದರು. ಇದನ್ನು ಗಮನಿಸಿದ ವಿರಾಟ್ ಕೊಹ್ಲಿ ಮೈದಾನದಲ್ಲಿದ್ದ ಪ್ರೇಕ್ಷಕರಿಗೆ ಅವರು ಭಾರತೀಯ ಕ್ರಿಕೆಟ್ ಎನ್ನುವುದನ್ನು ಮರೆಯಬೇಡಿ ಎಂದು ಸನ್ನೆ ಮಾಡಿದ್ದಾರೆ.
ಕೊಹ್ಲಿ ಈ ರೀತಿ ಪ್ರೇಕ್ಷಕರನ್ನು ಸುಮ್ಮನಾಗಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಎದುರಾಳಿ ಆಟಗಾರನೇ ಆಗಿದ್ದರೂ ಆತ ಮೂಲತಃ ನಮ್ಮ ದೇಶಕ್ಕಾಗಿ ಆಡುವ ಕ್ರಿಕೆಟಿಗ ಎನ್ನುವುದನ್ನು ಮರೆಯಬಾರದು. ಆಟಗಾರರನ್ನು ಮೈದಾನದಲ್ಲಿ ಗೇಲಿ ಮಾಡಬಾರದು ಎಂದು ಕೊಹ್ಲಿ ಸಂದೇಶ ನೀಡಿದ್ದಾರೆ.