Publish Date: Thu, 11 Apr 2024 (12:11 IST)
Updated Date: Thu, 11 Apr 2024 (12:13 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಅವರ ಸಹೋದರನಿಂದಲೇ 4.3 ಕೋಟಿ ರೂ. ವಂಚನೆಯಾದ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಅವರ ಮಲಸಹೋದರ ವೈಭವ್ ಪಾಂಡ್ಯ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಸಹಭಾಗಿತ್ವದ ಉದ್ಯಮವೊಂದರಿಂದ ಕ್ರಿಕೆಟಿಗರ ಹೆಸರು ಹೇಳಿಕೊಂಡು 4.3 ಕೋಟಿ ರೂ. ವಂಚನೆ ಮಾಡಿದ್ದಾರೆ.
ಕೃನಾಲ್, ಹಾರ್ದಿಕ್ ಮತ್ತು ವೈಭವ್ ಸೇರಿಕೊಂಡು ಕಂಪನಿಯೊಂದನ್ನು ಆರಂಭಿಸಿದ್ದರು. ಇದರಲ್ಲಿ ಹಾರ್ದಿಕ್ ಮತ್ತು ಕೃನಾಲ್ ಶೇ.40 ರಷ್ಟು ಬಂಡವಾಳ ಹಾಕಿದ್ದರೆ ವೈಭವ್ 20% ಬಂಡವಾಳ ಹೂಡಿದ್ದರು. ಷೇರುಗಳಿಗೆ ಅನುಗುಣವಾಗಿ ಪಾಲು ಹಂಚಿಕೆ ಮಾಡುವುದೆಂದು ತೀರ್ಮಾನವಾಗಿತ್ತು. ಆದರೆ ಹಾರ್ದಿಕ್-ಕೃನಾಲ್ ಗಮನಕ್ಕೆ ತಾರದೇ ಅದೇ ಕಂಪನಿ ಹೆಸರು ಹೇಳಿಕೊಂಡು ವೈಭವ್ ಇನ್ನೊಂದು ಕಂಪನಿ ತೆರೆದಿದ್ದರು.
ಇದರಿಂದಾಗಿ ಕಂಪನಿ ಜೊತೆ ಮಾಡಿಕೊಂಡಿದ್ದ ಮೂಲ ಒಪ್ಪಂದ ರದ್ದಾಗಿ 3 ಕೋಟಿ ರೂ. ನಷ್ಟವಾಗಿತ್ತು. ಅಲ್ಲದೆ ವೈಭವ್ ರಹಸ್ಯವಾಗಿ ತನ್ನ ಲಾಭಾಂಶವನ್ನು 20% ರಿಂದ 33.3% ಗೆ ಏರಿಕೆ ಮಾಡಿದ್ದರು. ಇದು ನಿಯಮಗಳಿಗೆ ವಿರುದ್ಧವಾಗಿರುವುದಲ್ಲದೆ, ಹಾರ್ದಿಕ್-ಕೃನಾಲ್ ಗೆ ನಷ್ಟವಾಗಿತ್ತು. ಈ ಕಾರಣಕ್ಕೆ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ವಂಚನೆ ಪ್ರಕರಣದಲ್ಲಿ ವೈಭವ್ ನ್ನು ಬಂಧಿಸಿದ್ದಾರೆ.