Publish Date: Sat, 04 May 2024 (09:16 IST)
Updated Date: Sat, 04 May 2024 (09:18 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡ ಮುಖಾಮುಖಿಯಾಗಲಿದೆ.
ಇದುವರೆಗೆ ನಡೆದ 10 ಪಂದ್ಯಗಳಿಂದ ಕೇವಲ 3 ಗೆಲುವು ಸಂಪಾದಿಸಿರುವ ಆರ್ ಸಿಬಿ ಈಗಾಗಲೇ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆರ್ ಸಿಬಿಗೆ ಈಗ ತವರಿನ ಪ್ರೇಕ್ಷಕರ ಎದುರು ಗೆದ್ದು ಮಾನ ಕಾಪಾಡಿಕೊಳ್ಳುವ ಅನಿವಾರ್ಯತೆಯಿದೆ.
ಈ ಟೂರ್ನಿಯುದ್ದಕ್ಕೂ ಆರ್ ಸಿಬಿ ನಿರಾಶಾದಾಯಕ ಪ್ರದರ್ಶನ ನೀಡಿದೆ. ಅದರಲ್ಲೂ ವಿಶೇಷವಾಗಿ ಆರ್ ಸಿಬಿ ಪೇಲವ ಬೌಲಿಂಗ್ ತಂಡಕ್ಕೆ ಮುಳುವಾಯಿತು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಚೇತೋಹಾರಿ ಪ್ರದರ್ಶನ ನೀಡಿರುವ ಆರ್ ಸಿಬಿ ಸತತ ಎರಡು ಗೆಲುವು ಕಂಡು ಉತ್ಸಾಹದಲ್ಲಿದೆ. ಇಂದೂ ಗೆದ್ದರೆ ಅದು ಹ್ಯಾಟ್ರಿಕ್ ಗೆಲುವಾಗಲಿದೆ.
ಇನ್ನೊಂದೆಡೆ ಗುಜರಾತ್ ಟೈಟನ್ಸ್ ಪರಿಸ್ಥಿತಿಯೂ ಹೆಚ್ಚು ಕಡಿಮೆ ಇದೇ ರೀತಿ ಆಗಿದೆ. 10 ಪಂದ್ಯಗಳಿಂದ 4 ಗೆಲುವು ಕಂಡಿರುವ ಗುಜರಾತ್ ಈಗ 8 ಅಂಕ ಪಡೆದಿದ್ದು ಪ್ಲೇ ಆಫ್ ಹಾದಿ ಬಹುತೇಕ ಮುಚ್ಚಿದೆ. ಕಳೆದ ಎರಡು ಪಂದ್ಯಗಳಲ್ಲಿ ಸತವಾಗಿ ಸೋತಿರುವ ಗುಜರಾತ್ ಗೆ ಈಗ ಗೆಲುವಿನ ಅನಿವಾರ್ಯತೆಯಿದೆ. ಈ ಟೂರ್ನಿಯ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗುಜರಾತ್ ಅದನ್ನು ಮುಂದುವರಿಸಲು ವಿಫಲರಾಗಿದ್ದರು. ಇದೀಗ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳುವ ಒತ್ತಡದಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.