Publish Date: Sat, 04 May 2024 (14:39 IST)
Updated Date: Sat, 04 May 2024 (14:41 IST)
ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ನಿರಾಶಾದಾಯಕ ಪ್ರದರ್ಶನ ನೀಡಿದ್ದು ಪ್ಲೇ ಆಫ್ ಹಂತಕ್ಕೇರುವುದು ಕನಸಾಗಿದೆ. ಮುಂದಿನ ಒಂದು ಪಂದ್ಯ ಸೋತರೆ ಮುಂಬೈ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.
ಸದ್ಯಕ್ಕೆ 11 ಪಂದ್ಯಗಳನ್ನಾಡಿರುವ ಮುಂಬೈ ಗೆದ್ದಿರುವುದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ಹೀಗಾಗಿ ಮುಂಬೈ ಪ್ಲೇ ಆಫ್ ಹಾದಿ ಬಹುತೇಕ ಬಂದ್ ಆಗಿದೆ. ಮುಂದಿನ ಒಂದು ಪಂದ್ಯದಲ್ಲಿ ಸೋತರೆ ಅಧಿಕೃತವಾಗಿ ಪ್ಲೇ ಆಫ್ ರೇಸ್ ನಿಂದ ಹೊರಬೀಳಲಿದೆ. ಹೀಗಿರುವಾಗ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲು ಸಲಹೆ ನೀಡಲಾಗಿದೆ.
ಮುಂಬೈ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದ್ದರೂ ಬುಮ್ರಾ ಎಲ್ಲಾ ಪಂದ್ಯಗಳಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಟೀಂ ಇಂಡಿಯಾ ಪ್ರಮುಖ ವೇಗಿ ಬುಮ್ರಾ ಮುಂಬರುವ ಟಿ20 ವಿಶ್ವಕಪ್ ಗೆ ಫಿಟ್ ಆಗಿರುವುದು ಮುಖ್ಯವಾಗಿದೆ. ಹೀಗಾಗಿ ಸತತ ಕ್ರಿಕೆಟ್ ನಿಂದ ಬಳಲಿರುವ ಬುಮ್ರಾಗೆ ಮುಂದಿನ ಪಂದ್ಯಗಳಿಂದ ವಿಶ್ರಾಂತಿ ನೀಡುವುದು ಒಳಿತು ಎಂದು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದ ಹಿತದೃಷ್ಟಿಯಿಂದ ಬುಮ್ರಾಗೆ ಮುಂದಿನ ಪಂದ್ಯಗಳಿಗೆ ವಿಶ್ರಾಂತಿ ನೀಡುವುದು ಒಳಿತು. ಹೇಗಿದ್ದರೂ ಇನ್ನೊಂದು ಪಂದ್ಯದ ಬಳಿಕ ಮುಂಬೈ ಪ್ಲೇ ಆಫ್ ನಿಂದ ಅಧಿಕೃತವಾಗಿ ಹೊರಬೀಳಲಿದೆ ಎಂದು ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಬುಮ್ರಾ ಇದುವರೆಗೆ ಈ ಐಪಿಎಲ್ ನ ಎಲ್ಲಾ 11 ಪಂದ್ಯಗಳಲ್ಲೂ ಆಡಿದ್ದಾರೆ.