ಚೆನ್ನೈ: ಸಿಎಸ್ ಕೆ ಮಾಜಿ ನಾಯಕ ಎಂಎಸ್ ಧೋನಿ ಕ್ರೀಸ್ ಗೆ ಬಂದರೆ ಅಭಿಮಾನಿಗಳ ಅಬ್ಬರ ಜೋರಾಗಿರುತ್ತದೆ. ಇದೇ ರೀತಿ ನಿನ್ನೆಯ ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಧೋನಿ ಕ್ರೀಸ್ ಗೆ ಬಂದಾಗ ಅಭಿಮಾನಿಗಳ ಕೂಗು ಮೇರೆ ಮೀರಿದೆ.
ಆದರೆ ಈ ವೇಳೆ ಕೆಕೆಆರ್ ತಂಡದ ಆಟಗಾರ ಆಂಡ್ರೆ ರಸೆಲ್ ಕಿವಿ ಮುಚ್ಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧೋನಿ ಅಭಿಮಾನಿಗಳ ಅಬ್ಬರ ತಾಳಲಾರದೇ ರಸೆಲ್ ಕಿವಿ ಮುಚ್ಚಿಕೊಂಡಿದ್ದು ಇದಕ್ಕೆ ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿದೆ.
ಶಿವಂ ದುಬೆ ವಿಕೆಟ್ ಬಿದ್ದಾಗ ಧೋನಿ ಕ್ರೀಸ್ ಗೆ ಬಂದಿದ್ದರು. ಈ ವೇಳೆ ಚಿಪಾಕ್ ಮೈದಾನದಲ್ಲಿ ಅಭಿಮಾನಿಗಳ ಕೂಗು ಮೇರೆ ಮೀರಿತ್ತು. ಧೋನಿ ಹೆಸರೆತ್ತಿ ಜೋರಾಗಿ ಅಬ್ಬರಿಸುತ್ತಿದ್ದರು. ಇದರಿಂದ ಕೊಂಚ ಕಿರಿ ಕಿರಿಗೊಳಗಾದಂತೆ ಕಂಡುಬಂದ ರಸೆಲ್ ಕಿವಿ ಮುಚ್ಚಿಕೊಂಡರು.
ಚೆನ್ನೈ ಎಂದರೆ ಧೋನಿಗೆ ಎರಡನೇ ತವರಿದ್ದಂತೆ. ತಲಾ ಎಂದೇ ಧೋನಿಯನ್ನು ಗೌರವಿಸುತ್ತಾರೆ. ಹೀಗಾಗಿ ಇಲ್ಲಿ ಧೋನಿ ಆಡಲು ಬಂದರೆ ಅಭಿಮಾನಿಗಳ ದಂಡೇ ಅವರನ್ನು ಚಿಯರ್ ಅಪ್ ಮಾಡಲು ಹರಿದುಬರುತ್ತದೆ. ಅದಕ್ಕೆ ಈ ಪಂದ್ಯ ಮತ್ತೊಮ್ಮೆ ಸಾಕ್ಷಿಯಾಯಿತು.