Publish Date: Mon, 08 Apr 2024 (08:13 IST)
Updated Date: Mon, 08 Apr 2024 (08:17 IST)
ಚೆನ್ನೈ: ಐಪಿಎಲ್ 2024 ರಲ್ಲಿ ಇಂದು ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೆಕೆಆರ್ ತಂಡವನ್ನು ಎದುರಿಸಲಿದೆ.
ಋತುರಾಜ್ ಗಾಯಕ್ ವಾಡ್ ನೇತೃತ್ವದ ಸಿಎಸ್ ಕೆ ತವರಿನಲ್ಲಿ ನಡೆದಿದ್ದ ಆರಂಭಿಕ ಪಂದ್ಯವನ್ನು ಗೆದ್ದುಕೊಂಡಿತ್ತು. ಆದರೆ ಕಳೆದ ಎರಡು ಪಂದ್ಯಗಳಿಂದ ಯಾಕೋ ಅದೃಷ್ಟ ಕೈ ಕೊಟ್ಟಿದೆ. ಮೊದಲಿನಂತೆ ಗೆಲುವು ಕೈ ಹಿಡಿಯುತ್ತಿಲ್ಲ. ಕಳೆದ ಪಂದ್ಯದಲ್ಲಿ ಬ್ಯಾಟಿಗರು ನಿರೀಕ್ಷಿಸಿದಷ್ಟು ರನ್ ಗಳಿಸಿರಲಿಲ್ಲ. ಹೀಗಾಗಿ ಬೌಲರ್ ಗಳೂ ಅದನ್ನು ರಕ್ಷಿಸುವಲ್ಲಿ ಸೋತರು.
ಆದರೆ ಇಂದಿನ ಪಂದ್ಯ ತವರು ಚೆನ್ನೈ ಮೈದಾನದಲ್ಲೇ ನಡೆಯುತ್ತಿರುವುದರಿಂದ ಸಿಎಸ್ ಕೆಗೆ ಹೆಚ್ಚು ಅನುಕೂಲವಿದೆ. ತವರಿನಲ್ಲಿ ಚೆನ್ನೈ ತಂಡವನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಇಂದು ಋತುರಾಜ್ ಗಾಯಕ್ ವಾಡ್ ಪಡೆ ತಿರುಗಿಬೀಳುವ ವಿಶ್ವಾಸವಿದೆ.
ಆದರೆ ಎದುರಾಳಿ ಕೋಲ್ಕೊತ್ತಾ ನೈಟ್ ರೈಡರ್ಸ್ ಕೂಡಾ ಸಾಮಾನ್ಯ ತಂಡವಲ್ಲ. ಈ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದ ತಂಡವೆಂದರೆ ಕೋಲ್ಕೊತ್ತಾ ನೈಟ್ ರೈಡರ್ಸ್. ಇದುವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲೂ ಆಲ್ ರೌಂಡರ್ ಪ್ರದರ್ಶನ ನೀಡಿದೆ. ಹೀಗಾಗಿ ಚೆನ್ನೈನಲ್ಲೂ ಪ್ರಮುಖ ಸ್ಪರ್ಧೆ ಒಡ್ಡಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.