ಮುಂಬೈ: ಐಪಿಎಲ್ 2023 ರಲ್ಲಿ ನಿನ್ನೆ ಒಂದೇ ದಿನ ಮೂರು ವಿವಾದಾತ್ಮಕ ತೀರ್ಪು ಬಂದಿದೆ. ಪಂಜಾಬ್, ಮುಂಬೈ, ರಾಜಸ್ಥಾನ್ ತಂಡಕ್ಕೆ ಇದರಿಂದ ಅನ್ಯಾಯವಾಗಿದೆ.
ಮೊದಲನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಪಂಜಾಬ್ ತಂಡ ಮುಖಾಮುಖಿಯಾಗಿತ್ತು. ಪಂಜಾಬ್ ಬ್ಯಾಟಿಂಗ್ ವೇಳೆ ಕೊನೆಯ 2 ಓವರ್ ಗಳಲ್ಲಿ 22 ರನ್ ಬೇಕಾಗಿತ್ತು. ಈ ವೇಳೆ ಪಂಜಾಬ್ ಬ್ಯಾಟಿಗ ಜಿತೇಶ್ ಶರ್ಮಾ ಸಿಕ್ಸರ್ ಸಿಡಿಸಿದ್ದರು. ಈ ಎಸೆತವನ್ನು ಬೌಂಡರಿ ಲೈನ್ ಬಳಿ ಶೇಕ್ ರಶೀದ್ ಕ್ಯಾಚ್ ಪಡೆದಿದ್ದರು. ಆದರೆ ಅವರ ಶೂ ಬೌಂಡರಿ ಗೆರೆಗೆ ತಾಗಿದ ಬಗ್ಗೆ ಅನುಮಾನವಿತ್ತು. ಥರ್ಡ್ ಅಂಪಾಯರ್ ಮತ್ತೊಮ್ಮೆ ಪರಶೀಲಿಸಿ ಔಟ್ ತೀರ್ಪು ನೀಡಿದರು. ಆದರೆ ಅಂಪಾಯರ್ ತರಾತುರಿಯಲ್ಲಿ ಔಟ್ ತೀರ್ಪು ನೀಡಿದರು ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ರಾಜಸ್ಥಾನ್ ಮತ್ತು ಮುಂಬೈ ಮುಖಾಮುಖಿಯಾಗಿತ್ತು. ರಾಜಸ್ಥಾನ್ ಬ್ಯಾಟಿಗ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿದ್ದರು. ಕೊನೆಯ ಓವರ್ ನಲ್ಲಿ ಯಶಸ್ವಿ ಕ್ಯಾಚ್ ಔಟ್ ಆದರು. ಆದರೆ ಈ ಎಸೆತ ನೋ ಬಾಲ್ ಆಗಿತ್ತು ಎನ್ನುವ ಅನುಮಾನವಿದೆ. ಆದರೆ ಅಂಪಾಯರ್ ಪರಿಶೀಲಿಸದೇ ಔಟ್ ತೀರ್ಪು ನೀಡಿದರು.
ವಿಪರ್ಯಾಸವೆಂದರೆ ಮುಂಬೈ ಮತ್ತೆ ಬ್ಯಾಟಿಂಗ್ ಗಿಳಿದಾಗ ರೋಹಿತ್ ಶರ್ಮಾ ಔಟ್ ತೀರ್ಪು ಕೂಡಾ ವಿವಾದಕ್ಕೀಡಾಗಿದೆ. ರೋಹಿತ್ ಸಂದೀಪ್ ಶರ್ಮಾ ಎಸೆತದಲ್ಲಿ ಬೌಲ್ಡ್ ಔಟ್ ಆದರು. ಆದರೆ ಬಾಲ್ ನೇರವಾಗಿ ವಿಕೆಟ್ ತಾಗಿರಲಿಲ್ಲ. ಸಂಜು ಸ್ಯಾಮ್ಸನ್ ಗ್ಲೌಸ್ ವಿಕೆಟ್ ಗೆ ತಾಗಿದ್ದರಿಂದ ಸ್ಟಂಪ್ ಲೈಟ್ ಆನ್ ಆಗಿತ್ತು ಎನ್ನುವುದು ಅಭಿಮಾನಿಗಳ ವಾದ. ಒಟ್ಟಾರೆ ನಿನ್ನೆ ಒಂದೇ ದಿನ ಅಂಪಾಯರ್ ಗಳು ಮೂರು ವಿವಾದಾತ್ಮಕ ತೀರ್ಪು ನೀಡಿದಂತಾಗಿದೆ.