ಬಾರ್ಬಡೋಸ್: ಟಿ20 ವಿಶ್ವಕಪ್ ನಲ್ಲಿ ನಾಳೆ ಭಾರತ ಮತ್ತು ದ. ಆಫ್ರಿಕಾ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಆದರೆ ಇದಕ್ಕೆ ಮೊದಲು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಭಾರತ ತಂಡ ಸೋಲಲಿ ಎಂದು ಆಶಿಸಿದ್ದು ಇದಕ್ಕೆ ಭಾರತೀಯ ಅಭಿಮಾನಿಗಳು ನಿಮಗೆ ಸರಿಯಾಗಿ ಬುದ್ಧಿ ಕಲಿಸ್ತೀವಿ ಎಂದು ತಿರುಗೇಟು ನೀಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ತವರು ತಂಡ ಇಂಗ್ಲೆಂಡ್ ತಂಡ ಸೋತ ಬಳಿಕ ಮೈಕಲ್ ವಾನ್ ಭಾರತದ ಮೇಲೆ ಹೊಟ್ಟೆ ಉರಿ ಹೊರಹಾಕಿದ್ದಾರೆ. ಟೀಂ ಇಂಡಿಯಾ ಫೈನಲ್ ಗೆ ತಲುಪಿದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್, ಸೋಷಿಯಲ್ ಮೀಡಿಯಾದಲ್ಲಿ ಮೈಕಲ್ ವಾನ್ ರನ್ನು ಟ್ಯಾಗ್ ಮಾಡಿ ನೀವು ಚೆನ್ನಾಗಿದ್ದೀರಾ ಎಂದು ಭಾವಿಸಿದ್ದೇನೆ ಎಂದು ಕಾಲೆಳೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ವಾನ್, ನಾನು ಚೆನ್ನಾಗಿದ್ದೀನಾ ಎಂದು ಕೇಳಿದ್ದಕ್ಕೆ ಧನ್ಯವಾದಗಳು. ಈ ವಿಶ್ವಕಪ್ ಫೈನಲ್ ನಲ್ಲಿ ಕಳೆದ ಏಕದಿನ ವಿಶ್ವಕಪ್ ಫೈನಲ್ ನಂತೆ ಭಾರತ ಸುಲಭವಾಗಿ ಗೆಲ್ಲಬೇಕು ಎಂದು ವ್ಯಂಗ್ಯ ಮಾಡಿದ್ದಾರೆ. ಕಳೆದ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಭಾರತ ಸೋತಿರುವುದನ್ನು ಪ್ರಸ್ತಾಪಿಸಿ ಕೆಣಕಿದ್ದಾರೆ.
ಇದಕ್ಕೆ ಭಾರತೀಯ ಅಭಿಮಾನಿಗಳು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಭಾರತ ತಂಡವನ್ನು ಕಂಡರೆ ಸದಾ ಹೊಟ್ಟೆ ಉರಿದುಕೊಳ್ಳುವ ಮೈಕಲ್ ವಾನ್ ಗೆ, ಈ ಟ್ವೀಟ್ ನ್ನು ನಾವು ಸೇವ್ ಮಾಡಿಟ್ಟುಕೊಳ್ಳುತ್ತೇವೆ. ಭಾರತ ಗೆಲ್ಲಲಿ ಆಗ ನಿಮಗೆ ಬುದ್ಧಿ ಕಲಿಸುತ್ತೇವೆ ಎಂದು ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ.