ಗಯಾನ: ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾವೇನೋ ಅದ್ಭುತ ಪ್ರದರ್ಶನ ನೀಡುತ್ತಾ ಫೈನಲ್ ತನಕ ಬಂದಿದೆ. ಆದರೆ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮಾತ್ರ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ.
ಕೊಹ್ಲಿ ಎಷ್ಟೇ ಕಳಪೆ ಫಾರ್ಮ್ ನಲ್ಲಿದ್ದರೂ ನಾಕೌಟ್ ಪಂದ್ಯಗಳಲ್ಲಿ ಅವರ ದಾಖಲೆ ಉತ್ತಮವಾಗಿಯೇ ಇದೆ. ಹೀಗಾಗಿ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಸಿಡಿಯಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಕೊಹ್ಲಿ ಕೇವಲ 9 ರನ್ ಗಳಿಗೆ ಔಟಾಗಿ ಪೆವಿಲಿಯನ್ ಸೇರಿದ್ದರು.
ಈ ಪಂದ್ಯದಲ್ಲೂ ವಿಫಲರಾಗಿದ್ದು ಸ್ವತಃ ಕೊಹ್ಲಿಯನ್ನು ಹತಾಶೆಗೆ ದೂಡಿತ್ತು. ಹೀಗಾಗಿ ಔಟಾಗಿ ಪೆವಿಲಿಯನ್ ಗೆ ಹೋದ ಬಳಿಕ ಡಗೌಟ್ ನಲ್ಲಿ ಸಪ್ಪೆ ಮುಖ ಮಾಡಿಕೊಂಡು ಕೂತಿದ್ದರು. ಅವರು ನಿರಾಸೆಯಲ್ಲಿ ಕೂತಿರುವುದನ್ನು ನೋಡಿ ಕೋಚ್ ರಾಹುಲ್ ದ್ರಾವಿಡ್ ಬಳಿ ಹೋಗಿ ಅವರ ತೊಡೆ ತಟ್ಟಿ ಸಮಾಧಾನಿಸಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಷ್ಟೇ ಅಲ್ಲ, ಪಂದ್ಯದ ಬಳಿಕವೂ ಕೊಹ್ಲಿ ಫಾರ್ಮ್ ಬಗ್ಗೆ ದ್ರಾವಿಡ್ ಸಮರ್ಥನೆಯ ಮಾತನಾಡಿದ್ದಾರೆ. ನಮಗೆ ವಿಶ್ವಾಸವಿದೆ. ಕೊಹ್ಲಿ ಫೈನಲ್ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಆಡಿಯೇ ಆಡುತ್ತಾರೆ ಎಂದು ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ಕೂಡಾ ಇದೇ ಮಾತು ಹೇಳಿದ್ದಾರೆ. ಹೀಗಾಗಿ ಈಗ ಅಭಿಮಾನಿಗಳೂ ಫೈನಲ್ ನಲ್ಲಿ ಕೊಹ್ಲಿ ಬ್ಯಾಟ್ ನಿಂದ ದೊಡ್ಡ ಮೊತ್ತ ಬರುವುದನ್ನೇ ಕಾದು ಕುಳಿತಿದ್ದಾರೆ.