ಕೊಲಂಬೊ: ಹೊಸ ನಾಯಕ, ಹೊಸ ಕೋಚ್ ನೇತೃತ್ವದಲ್ಲಿ ಟೀಂ ಇಂಡಿಯಾ ಇಂದಿನಿಂದ ಶ್ರೀಲಂಕಾ ವಿರುದ್ಧ ಟಿ20 ಸರಣಿ ಆಡಲಿಳಿಯಲಿದೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ಪಲ್ಲಿಕೆಲೆ ಮೈದಾನದಲ್ಲಿ ನಡೆಯುತ್ತಿದೆ.
ಈಗಷ್ಟೇ ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಗೆದ್ದು ಬೀಗಿರುವ ಟೀಂ ಇಂಡಿಯಾ ಈಗ ಮತ್ತೊಂದು ಟಿ20 ಸರಣಿ ಆಡುತ್ತಿದೆ. ಆದರೆ ಈ ಬಾರಿ ಹೊಸ ನಾಯಕತ್ವದಲ್ಲಿ ಹೊಸ ತಂಡ ಕಣಕ್ಕಿಳಿಯುತ್ತಿದೆ. ಸೂರ್ಯಕುಮಾರ್ ಯಾದವ್ ಟಿ20 ನಾಯಕನಾದ ಬಳಿಕ ಮೊದಲ ಸರಣಿ ಇದಾಗಿದೆ. ಗೌತಮ್ ಗಂಭೀರ್ ಗೆ ಕೋಚ್ ಆಗಿ ಇದು ಮೊದಲ ಸರಣಿಯಾಗಿದೆ.
ರಾಹುಲ್ ದ್ರಾವಿಡ್ ನಂತರ ಟೀಂ ಇಂಡಯಾ ಹೊಸ ಕೋಚಿಂಗ್ ಬಳಗಕ್ಕೆ ಹೇಗೆ ಹೊಂದಿಕೊಂಡಿದೆ ಎಂಬುದು ಈ ಸರಣಿಯಿಂದ ತಿಳಿಯಲಿದೆ. ಸೂರ್ಯಕುಮಾರ್ ಗೆ ನಾಯಕರಾಗಿ ಇದು ಮೊದಲ ಅನುಭವವಲ್ಲ. ಈ ಮೊದಲು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ಸರಣಿ ಗೆಲುವು ಕಂಡಿದ್ದರು. ಆದರೆ ಪೂರ್ಣಪ್ರಮಾಣದ ನಾಯಕರಾದ ಬಳಿಕ ಇದು ಮೊದಲ ಸರಣಿಯಾಗಿರಲಿದೆ.
ಇನ್ನು, ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ ನಿವೃತ್ತಿ ನಂತರ ತೆರವಾಗಿರುವ ಸ್ಥಾನಕ್ಕೆ ರಿಷಬ್ ಪಂತ್ ಬರುವ ಸಾಧ್ಯತೆಯಿದೆ. ಆರಂಭಿಕರಾಗಿ ಯಶಸ್ವಿ ಜೈಸ್ವಾಲ್-ಶುಬ್ಮನ್ ಗಿಲ್ ಕಣಕ್ಕಿಳಿಯಬಹುದು. ಇದಲ್ಲದೆ, ಸಂಜು ಸ್ಯಾಮ್ಸನ್ ಗೂ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆಯದೆ. ಹಾರ್ದಿಕ್ ಪಾಂಡ್ಯ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಲ ತುಂಬಲಿದ್ದಾರೆ.
ಭಾರತಕ್ಕೆ ಹೋಲಿಸಿದರೆ ಶ್ರೀಲಂಕಾ ತಂಡ ದುರ್ಬಲವೆನಿಸಿದರೂ ತವರಿನಲ್ಲಿ ಲಂಕಾ ಆಟಗಾರರು ಮಿಂಚಬಹುದು. ಸ್ವತಃ ನಾಯಕ ಚರಿತ ಅಸಲಂಕ, ವಣೀಂದು ಹಸರಂಗ, ದಸನು ಶಣಕ ಮುಂತಾದ ಟಿ20 ಸ್ಪೆಷಲಿಸ್ಟ್ ಗಳು ತಂಡದಲ್ಲಿದ್ದಾರೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸೋನಿ ಲೈವ್ ಮತ್ತು ಜಿಯೋ ಟಿವಿ ಆಪ್ ನಲ್ಲಿ ಲೈವ್ ವೀಕ್ಷಿಸಬಹುದಾಗಿದೆ.