ಬೆಂಗಳೂರು: ನಿನ್ನೆ ಸಂಜೆ ಮಳೆಯಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ-ದ.ಆಫ್ರಿಕಾ ನಡುವಿನ ಐದನೇ ಟಿ20 ಪಂದ್ಯ ರದ್ದಾಗಿತ್ತು.
ಭಾರತ ಮೊದಲು ಬ್ಯಾಟಿಂಗ್ ನಡೆಸಿ ಕೇವಲ 3.3 ಓವರ್ ಬ್ಯಾಟಿಂಗ್ ನಡೆಸಲಷ್ಟೇ ಶಕ್ತವಾಗಿತ್ತು. ಇದಾದ ಬಳಿಕ ಎಡೆಬಿಡದೇ ಸುರಿದ ಮಳೆಯಿಂದಾಗಿ ಆಟ ರದ್ದುಗೊಳಿಸಬೇಕಾಯಿತು. ಸರಣಿ 2-2 ರಿಂದ ಸಮಬಲವಾಯಿತು. ಇದು ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿತ್ತು.
ಈ ಸರಣಿಯಲ್ಲಿ ಮೊದಲ ಬಾರಿಗೆ ನಾಯಕರಾಗಿ ತಂಡವನ್ನು ಮುನ್ನಡೆಸಿದ ರಿಷಬ್ ಪಂತ್ ಬೇಡದ ದಾಖಲೆಯೊಂದನ್ನು ಮಾಡಿದರು. ನಿನ್ನೆಯ ಪಂದ್ಯದಲ್ಲೂ ಟಾಸ್ ಸೋತ ರಿಷಬ್ ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಎಲ್ಲಾ ಪಂದ್ಯಗಳಲ್ಲೂ ಟಾಸ್ ಸೋತು, ಎಲ್ಲಾ ಪಂದ್ಯದಲ್ಲೂ ಮೊದಲು ಬ್ಯಾಟಿಂಗ್ ಗಿಳಿದ ಮೊದಲ ನಾಯಕ ಎಂಬ ಬೇಡದ ದಾಖಲೆ ಮಾಡಿದರು. ಟಾಸ್ ಸೋಲುವುದರಲ್ಲಿ ಕೊಹ್ಲಿ ದಾಖಲೆ ಮಾಡಿದ್ದರೆ, ರಿಷಬ್ ಅವರನ್ನೂ ಮೊದಲ ಸರಣಿಯಲ್ಲೇ ಮೀರಿಸಿದರು!