ನಾಗ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಏಕದಿನ ಸರಣಿ ಮುಗದಿದ್ದು ಈಗ ಟಿ20 ಸರಣಿ ಆರಂಭವಾಗಲಿದೆ. ಇಂದು ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯುವುದು.
ಐದು ಪಂದ್ಯಗಳ ಟಿ20 ಸರಣಿ ಇದಾಗಿದ್ದು ಮೊದಲ ಪಂದ್ಯ ಇಂದು ನಾಗ್ಪುರದಲ್ಲಿ ನಡೆಯಲಿದೆ. ಈಗಾಗಲೇ ಏಕದಿನ ಸರಣಿ ಸೋತಿರುವ ಟೀಂ ಇಂಡಿಯಾಗೆ ಈಗ ಟಿ20 ಸರಣಿ ಗೆಲ್ಲುವುದು ಪ್ರತಿಷ್ಠೆಯ ವಿಚಾರವಾಗಿದೆ. ಜೊತೆಗೆ ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿಯೇ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಇದಕ್ಕೆ ಈ ಸರಣಿ ಸಿದ್ಧತೆಯ ವೇದಿಕೆ ಎಂದೇ ಹೇಳಬಹುದು.
ಟಿ20 ಫಾರ್ಮ್ಯಾಟ್ ನಲ್ಲಿ ಸತತವಾಗಿ ಯಶಸ್ಸು ಪಡೆಯುತ್ತಲೇ ಬಂದಿದ್ದ ಟೀಂ ಇಂಡಿಯಾ ಕಳೆದ ಕೆಲವೊಂದು ಸರಣಿಗಳಿಂದ ಏಳು-ಬೀಳುಗಳನ್ನು ಕಾಣುತ್ತಿದೆ. ಭಾರತ ತಮಡದಲ್ಲಿ ಅತಿಯಾದ ಪ್ರಯೋಗಗಳೂ ಇದಕ್ಕೆ ಕಾರಣವೆನ್ನಬಹುದು.
ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಭಾರತ ಈ ಸರಣಿಗೆ ಅತ್ಯುತ್ತಮ ತಂಡವನ್ನೇ ಆಯ್ಕೆ ಮಾಡಿದೆ. ಓಪನರ್ ಆಗಿ ಅಭಿಷೇಕ್ ಶರ್ಮಾ ಜೊತೆ ಸಂಜು ಸ್ಯಾಮ್ಸನ್ ಕಣಕ್ಕಿಳಿಯಲಿದ್ದಾರೆ. ಸಂಜು ಇತ್ತೀಚೆಗೆ ಯುವರಾಜ್ ಸಿಂಗ್ ಜೊತೆ ವಿಶೇಷ ತರಬೇತಿ ಪಡೆದು ಬಂದಿದ್ದು ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ವಿಕೆಟ್ ಕೀಪರ್ ಆಗಿ ಸಂಜು ಇರುವುದರಿಂದ ಮತ್ತೊಬ್ಬ ಹೆಚ್ಚುವರಿ ಬ್ಯಾಟಿಗನಿಗೆ ಅವಕಾಶ ಸಿಗಲಿದೆ. ಇದರ ಲಾಭ ರಿಂಕು ಸಿಂಗ್ ಪಾಲಾಗುತ್ತಾ ನೋಡಬೇಕಿದೆ. ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ ಕಮ್ ಬ್ಯಾಕ್ ಮಾಡಿರುವುದರಿಂದ ಅರ್ಷ್ ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ನಡುವೆ ಪೈಪೋಟಿಯಿರಲಿದೆ. ಇಂದಿನ ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.