Publish Date: Mon, 19 Jan 2026 (09:22 IST)
Updated Date: Mon, 19 Jan 2026 (09:24 IST)
ಇಂಧೋರ್: ಭಾರತ ಮತ್ತು ನ್ಯೂಜಿಲೆಂಡ್ ಏಕದಿನ ಸರಣಿಯ ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಹಿರಿಯ ಆಲ್ ರೌಂಡರ್ ರವೀಂದ್ರ ಜಡೇಜಾ ಆಡಿದ್ದಾರೆ. ಆದರೆ ವಿಕೆಟ್ ಪಡೆಯಲ್ಲ, ರನ್ ಮಾಡಲ್ಲ ಅವರು ಇನ್ನೂ ಯಾಕೆ ತಂಡದಲ್ಲಿದ್ದಾರೆ ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವೀಂದ್ರ ಜಡೇಜಾಗೆ ಈಗ 37 ವರ್ಷ. ರೋಹಿತ್, ಕೊಹ್ಲಿ ವಯಸ್ಸಿನವರೇ. ಇತ್ತೀಚೆಗಿನ ದಿನಗಳಲ್ಲಿ ಜಡೇಜಾ ಮೊದಲಿನಷ್ಟು ಪ್ರಭಾವ ಬೀರುತ್ತಿಲ್ಲ. 2022 ರಿಂದ ಜಡೇಜಾ 28 ಇನಿಂಗ್ಸ್ ಗಳಿಂದ ಗಳಿಸಿದ್ದು ಕೇವಲ 482 ರನ್. 38 ಇನಿಂಗ್ಸ್ ಗಳಿಂದ ಗಳಿಸಿದ್ದು 44 ವಿಕೆಟ್ ಗಳು.
ಪ್ರತೀ ಬಾರಿಯೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಯಸ್ಸಾಯ್ತು, ಅವರ ನಿವೃತ್ತಿ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಇದರ ನಡುವೆ ಪ್ರಭಾವವೇ ಬೀರದ ರವೀಂದ್ರ ಜಡೇಜಾ ಬಗ್ಗೆ ಯಾರೂ ಚಕಾರವೆತ್ತದೇ ಇರುವುದು ಅಚ್ಚರಿಯಾಗುತ್ತದೆ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆಯ ಪಂದ್ಯದಲ್ಲೂ ಜಡೇಜಾ ಕೊಂಚ ಹೊತ್ತು ಕೊಹ್ಲಿಗೆ ಸಾಥ್ ನೀಡಿದ್ದರೂ ಸಾಕಿತ್ತು. ಆದರೆ ಅವರು 16 ಎಸೆತಗಳಿಂದ ಗಳಿಸಿದ್ದು 12 ರನ್. ಇನ್ನು ಬೌಲಿಂಗ್ ವಿಚಾರಕ್ಕೆ ಬಂದರೆ ಮಧ್ಯಮ ಓವರ್ ಗಳಲ್ಲಿ ವಿಕೆಟ್ ಕಬಳಿಸದೇ ಹೋದರೂ ರನ್ ನಿಯಂತ್ರಿಸುವ ಹೊಣೆ ಸ್ಪಿನ್ನರ್ ಗಳದ್ದು. ಆ ವಿಚಾರದಲ್ಲಿ ಜಡೇಜಾ ಮಾತ್ರವಲ್ಲ ಕುಲದೀಪ್ ಯಾದವ್ ಕೂಡಾ ವಿಫಲರಾಗಿದ್ದಾರೆ. ಹೀಗಾಗಿಯೇ ಭಾರತ 5 ರನ್ ಗೇ 2 ವಿಕೆಟ್ ಕಬಳಿಸಿದ್ದರೂ ನಂತರ ಎದುರಾಳಿಗಳು 300 ಪ್ಲಸ್ ರನ್ ಗಳಿಸಲು ಸಾಧ್ಯವಾಗಿದೆ. ಹೀಗಾಗಿ ಜಡೇಜಾ ತಂಡದಲ್ಲಿ ಯಾಕಿದ್ದಾರೆ ಎಂದು ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ.