Publish Date: Thu, 14 Dec 2023 (11:10 IST)
Updated Date: Thu, 14 Dec 2023 (11:10 IST)
ಮುಂಬೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮಹಿಳಾ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನವಾದ ಇಂದು ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ಬರೋಬ್ಬರಿ 18 ವರ್ಷಗಳ ಬಳಿಕ ನಡೆಯುತ್ತಿರುವ ಟೆಸ್ಟ್ ಪಂದ್ಯ ಇದಾಗಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಇತ್ತೀಚೆಗಿನ ವರದಿ ಬಂದಾಗ ಭಾರತ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 102 ರನ್ ಗಳಿಸಿದೆ. ಕನ್ನಡತಿ ಶುಭಾ ಸತೀಶ್ 32, ಅನುಭವಿ ಜೆಮಿಮಾ ರೊಡ್ರಿಗಸ್ 26 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದಕ್ಕೆ ಮೊದಲು ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧನಾ 17 ಮತ್ತು ಶಫಾಲಿ ವರ್ಮ 19 ರನ್ ಗಳಿಸಿ ಔಟಾದರು. ಒಂದು ಹಂತದಲ್ಲಿ 47 ರನ್ ಗೆ 2 ವಿಕೆಟ್ ಕಳೆದುಕೊಂಡಾಗ ಜೊತೆಯಾದ ಶುಭಾ-ಜೆಮಿಮಾ ಜೋಡಿ ಇದೀಗ ಅರ್ಧಶತಕದ ಜೊತೆಯಾಟವಾಡುತ್ತಿದೆ.