ರಾಯ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ರಾಯ್ಪುರದಲ್ಲಿ ನಡಯಲಿದೆ.
ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾ ಕಳೆದ ಪಂದ್ಯವನ್ನು ಸೋತಿತ್ತು. ಹೀಗಾಗಿ ಸರಣಿ ಜೀವಂತವಾಗಿದೆ. ಇದುವರೆಗೆ ನಡೆದ ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಅದ್ಭುತವಾಗಿತ್ತು. ಆದರೆ ಬೌಲರ್ ಗಳು ಕೈಕೊಟ್ಟಿದ್ದರು. ಆಸೀಸ್ ನಂತಹ ದೈತ್ಯ ತಂಡಕ್ಕೆ ಕಡಿವಾಣ ಹಾಕುವಂತಹ ಬೌಲರ್ ಗಳೇ ನಮ್ಮಲ್ಲಿಲ್ಲ. ಹೀಗಾಗಿ ಟೀಂ ಇಂಡಿಯಾಗೆ ಭಾರೀ ತಲೆನೋವು ಎದುರಾಗಿದೆ.
ಅತ್ತ ಆಸ್ಟ್ರೇಲಿಯಾಗೆ ಕಳೆದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಆಡಿದ ರೀತಿಯೇ ಹೊಸ ಹುರುಪು ತಂದಿರುತ್ತದೆ. ದಾಖಲೆಯ ಶತಕ ಸಿಡಿಸಿದ್ದ ಮ್ಯಾಕ್ಸ್ ವೆಲ್ ಭಾರತದ ದುರ್ಬಲ ಬೌಲಿಂಗ್ ನ ಹುಳುಕುಗಳನ್ನೆಲ್ಲಾ ಹೊರತೆಗೆದಿದ್ದರು.
ಅಲ್ಲದೆ, ಆಸ್ಟ್ರೇಲಿಯಾಗೆ ಸರಣಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಒಂದು ವೇಳೆ ಭಾರತ ಗೆದ್ದರೆ ಇಂದೇ ಸರಣಿ ಅತಿಥೇಯ ತಂಡದ ಪಾಲಾಗಲಿದೆ. ಆದರೆ ಹಾಗಾಗದಂತೆ ತಡೆಯಲು ಆಸೀಸ್ ಇಂದೂ ತನ್ನ ಫುಲ್ ಸ್ಟ್ರೆಂಗ್ತ್ ತಂಡವನ್ನು ಕಣಕ್ಕಿಳಿಸಬಹುದು. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.