ಮುಂಬೈ: ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವೈಟ್ ಬಾಲ್ ಕ್ರಿಕೆಟ್ ನಿಂದ ದೂರ ಸರಿಯಲು ನಿರ್ಧರಿಸಿದ್ದರು. ಆದರೆ ಬಿಸಿಸಿಐಗೆ ಅವರನ್ನು ಕೈ ಬಿಡಲು ಮನಸ್ಸಿಲ್ಲ.
ರೋಹಿತ್ ಶರ್ಮಾ ಈಗಾಗಲೇ ಟಿ20 ಕ್ರಿಕೆಟ್ ನಲ್ಲಿ ಆಡಲು ನಿರಾಕರಿಸುತ್ತಿದ್ದರು. ಹೀಗಾಗಿ ಉಭಯ ದೇಶಗಳ ಸರಣಿಗೆ ಹಾರ್ದಿಕ್ ಪಾಂಡ್ಯರನ್ನು ನಾಯಕನಾಗಿ ಮಾಡಲಾಗುತ್ತಿತ್ತು. ಆದರೆ ಜೂನ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ರೋಹಿತ್ ರನ್ನೇ ನಾಯಕರಾಗಿ ಮಾಡಲು ಬಿಸಿಸಿಐ ಪ್ರಯತ್ನ ನಡೆಸಿದೆ.
ಇದಕ್ಕಾಗಿ ಮತ್ತೆ ಟಿ20 ಕ್ರಿಕೆಟ್ ನಾಯಕತ್ವ ಹೊಣೆ ಹೊರಲು ಒತ್ತಡ ಹೇರುತ್ತಿದೆ. ಏಕದಿನ ವಿಶ್ವಕಪ್ ನಲ್ಲಿ ರೋಹಿತ್ ತಂಡವನ್ನು ಮುನ್ನಡೆಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಹೀಗಾಗಿ ಟಿ20 ವಿಶ್ವಕಪ್ ನಲ್ಲೂ ಅವರನ್ನೇ ನಾಯಕನಾಗಿ ಮಾಡುವ ಇರಾದೆ ಬಿಸಿಸಿಐನದ್ದು.
ಈಗಾಗಲೇ ಕೋಚ್ ಆಗಿ ದ್ರಾವಿಡ್ ರನ್ನೇ ಮುಂದುವರಿಸಲು ಬಿಸಿಸಿಐ ಯಶಸ್ವಿಯಾಗಿದೆ. ಈಗ ರೋಹಿತ್ ರನ್ನೂ ಮನ ಒಲಿಸಿ ಟಿ20 ತಂಡಕ್ಕೆ ಕರೆಸಿಕೊಳ್ಳಲು ಬಿಸಿಸಿಐ ಶತ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ದ.ಆಫ್ರಿಕಾ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ರೋಹಿತ್ ರನ್ನು ನಾಯಕನಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಅವರು ಬಿಲ್ ಕುಲ್ ಒಪ್ಪದೇ ಹೋದರೆ ಸೂರ್ಯಕುಮಾರ್ ಯಾದವ್ ರನ್ನೇ ತಂಡದ ನಾಯಕನಾಗಿ ನೇಮಿಸುವ ಸಾಧ‍್ಯತೆಯಿದೆ.