Publish Date: Wed, 30 Sep 2026 (21:05 IST)
Updated Date: Wed, 30 Sep 2026 (21:10 IST)
ಗುವಾಹಟಿ: ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಶತಕ ಸಿಡಿಸಿದ ಬಳಿಕ ಸಂಭ್ರಮಿಸಿದ ಪರಿ ರೋಹಿತ್ ನಿಂಗೆ ವಯಸ್ಸಾಯ್ತು ಎಂದು ಟೀಕಿಸುತ್ತಿದ್ದವರಿಗೆ ಉತ್ತರ ಕೊಟ್ಟ ರೀತಿಯಿತ್ತು.
ಇಂದು ಗುವಾಹಟಿಯಲ್ಲಿ ಅಕ್ಷರಶಃ ರನ್ ಹೊಳೆ ಹರಿಯುತ್ತಿದೆ. ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿ 405 ರನ್ ಗಳ ದೊಡ್ಡ ಗುರಿಯನ್ನೇ ನೀಡಿದೆ. ಇದಕ್ಕೆ ಉತ್ತರವಾಗಿ ಇದೀಗ ಟೀಂ ಇಂಡಿಯಾವೂ ರನ್ ಹೊಳೆ ಹರಿಸುತ್ತಿದೆ. ಆರಂಭಿಕ ವಿಕೆಟ್ ಗೆ ಶುಭಮನ್ ಗಿಲ್ ಮತ್ತು ರೋಹಿತ್ 250 ರನ್ ಗಳ ಜೊತೆಯಾಟವಾಡಿದ್ದಾರೆ.
ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಇಬ್ಬರೂ 20 ಓವರ್ ಗಳಲ್ಲೇ ತಂಡದ ಮೊತ್ತವನ್ನು 200 ರನ್ ಗಳ ಗಡಿ ದಾಟಿಸಿದ್ದಾರೆ. ಶುಭಮನ್ ಗಿಲ್ ಮೊದಲನೆಯವರಾಗಿ ಶತಕ ಪೂರೈಸಿದರು. ಒಟ್ಟು 86 ಎಸೆತ ಎದುರಿಸಿದ ಅವರು 145 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಇನ್ನೊಂದೆಡೆ ರೋಹಿತ್ ಕೂಡಾ ಇಂದು ಹಿಟ್ ಮ್ಯಾನ್ ಅವತಾರ ತಾಳಿದರು. 75 ಎಸೆತ ಎದುರಿಸಿದ ಅವರು 101 ರನ್ ಗಳಿಸಿ ಈಗಷ್ಟೇ ವಿಕೆಟ್ ಒಪ್ಪಿಸಿದ್ದಾರೆ. 72 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಅವರ ಎರಡನೇ ವೇಗದ ಶತಕವಾಗಿದೆ. ಇಂದು ಅವರು ತಮ್ಮ ಇನಿಂಗ್ಸ್ ನಲ್ಲಿ ಒಟ್ಟು 10 ಬೌಂಡರಿ 6 ಸಿಕ್ಸರ್ ಚಚ್ಚಿದರು.
ಇನ್ನು, ಶತಕ ಪೂರೈಸುತ್ತಿದ್ದಂತೇ ಚಿಕ್ಕ ಮಕ್ಕಳಂತೆ ಕುಣಿದಾಡಿಕೊಂಡು ಓಡಿದ ರೋಹಿತ್ ಆಕ್ರಮಣಕಾರಿಯಾಗಿ ಪಂಚ್ ಮಾಡಿ ಸಂಭ್ರಮಿಸಿದ್ದಾರೆ. ಸಾಮಾನ್ಯವಾಗಿ ರೋಹಿತ್ ಬ್ಯಾಟಿಂಗ್ ನಲ್ಲಷ್ಟೇ ಆಕ್ರಮಣಕಾರಿಯಾಗಿರುತ್ತಾರೆ. ಸಂಭ್ರಮಾಚರಣೆಯಲ್ಲಿ ಅವರು ಅಷ್ಟೊಂದು ಅಗ್ರೆಷನ್ ತೋರ್ಪಡಿಸುವುದಿಲ್ಲ. ಆದರೆ ಇಂದು ಅವರು ಸೆಲೆಬ್ರೇಷನ್ ಮಾಡಿದ ಪರಿ ಅವರ ವಯಸ್ಸು ಎತ್ತಿ ಆಡಿಕೊಳ್ಳುವವರಿಗೆ, ನಿವೃತ್ತಿಯಾಗಲಿ ಎಂದು ಕಾಮೆಂಟ್ ಮಾಡುವವರಿಗೆ ಮುಟ್ಟಿನೋಡಿಕೊಳ‍್ಳುವಂತೆ ತಿರುಗೇಟು ನೀಡುವಂತಿತ್ತು. ಇನ್ನು, ಇತ್ತೀಚೆಗಿನ ವರದಿ ಬಂದಾಗ ಭಾರತ 1 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 22 ಓವರ್ ಗಳಲ್ಲಿ 138 ರನ್ ಗಳಿಸಬೇಕಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ