ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ ದಸನು ಶಾನಕ ಮಾಡಿದ ಸಣ್ಣ ತಪ್ಪಿನಿಂದ ಸೋಲುವಂತಾಯಿತು.
ನಿನ್ನೆ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 20 ಓವರ್ ಗಳಲ್ಲಿ 202 ರನ್ ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪಾತುಮ್ ನಿಸ್ಸಂಕಾ ಶತಕದ ನೆರವಿನಿಂದ 202 ರನ್ ಕಲೆ ಹಾಕಿ ಪಂದ್ಯ ಟೈ ಆಯಿತು. ಬಳಿಕ ಸೂಪರ್ ಓವರ್ ನಲ್ಲಿ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ ಕೇವಲ 2 ರನ್ ಗಳಿಸಲಷ್ಟೇ ಶಕ್ತವಾಯಿತು.
ಅರ್ಷ್ ದೀಪ್ ಸಿಂಗ್ ಕೇವಲ 2 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದರು. ಬಳಿಕ ಟೀಂ ಇಂಡಿಯಾ ಸುಲಭವಾಗಿ ಒಂದೇ ಎಸೆತದಲ್ಲಿ 3 ರನ್ ಗಳಿಸಿ ಗೆಲುವು ದಾಖಲಿಸಿತು. ಶ್ರೀಲಂಕಾಗೆ ಗೆಲ್ಲುವ ಎಲ್ಲಾ ಅವಕಾಶವಿತ್ತು. ಆದರೆ 20 ನೆಯ ಓವರ್ ನಲ್ಲಿ ದಸನು ಮಾಡಿದ ತಪ್ಪಿಗೆ ಬೆಲೆ ತೆರಬೇಕಾಯಿತು.
ಕೊನೆಯ ಓವರ್ ನಲ್ಲಿ ಲಂಕಾಗೆ 12 ರನ್ ಬೇಕಾಗಿತ್ತು. ಟಿ20 ಕ್ರಿಕೆಟ್ ನಲ್ಲಿ ಇದೇನೂ ದೊಡ್ಡ ಮೊತ್ತವಲ್ಲ. ಕೊನೆಯ ಎಸೆತದಲ್ಲಿ ಮೂರು ರನ್ ಗಳಿಸಬೇಕಿತ್ತು. ಎರಡನೇ ರನ್ ಓಡಿದ ಶಾನಕ, ಅಕ್ಷರ್ ಪಟೇಲ್ ಬಾಲ್ ಫೀಲ್ಡ್ ಮಾಡುತ್ತಿರುವುದನ್ನು ಗಮನಿಸಿ ಡೈವ್ ಹೊಡೆದರು. ಆದರೆ ಅಕ್ಷರ್ ಮಿಸ್ ಫೀಲ್ಡ್ ಮಾಡಿದ್ದರು. ಇದನ್ನು ಗಮನಿಸಿ ಇನ್ನೊಂದು ತುದಿಯಲ್ಲಿದ್ದ ಜೆನಿತ್ ಮೂರನೇ ರನ್ ಗೆ ಓಡಲು ಮುಂದಾದರು. ಆದರೆ ಡೈವ್ ಹೊಡೆದಿದ್ದ ಶಾನಕ ಎದ್ದು ಮೂರನೇ ರನ್ ಗೆ ಓಡುವಷ್ಟು ಸಮಯ ಸಿಗಲಿಲ್ಲ. ಬಹುಶಃ ಅವರು ಡೈವ್ ಹೊಡೆಯದೇ ಇದ್ದಿದ್ದರೆ ಮೂರು ರನ್ ಗಳಿಸಬಹುದಿತ್ತು. ಲಂಕಾವೂ ಗೆಲ್ಲುತ್ತಿತ್ತು.