ಲಕ್ನೋ: ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಈಗ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ನದ್ದೇ ಚಿಂತೆ.
ಟೀಂ ಇಂಡಿಯಾ ಇತ್ತೀಚೆಗಿನ ದಿನಗಳಲ್ಲಿ ಟಿ20 ಸರಣಿಗಳಲ್ಲೂ ಮೊದಲಿನಷ್ಟು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಅದಕ್ಕೆ ಕಾರಣ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಉಪನಾಯಕ ಶುಭಮನ್ ಗಿಲ್ ಬ್ಯಾಟಿಂಗ್ ವೈಫಲ್ಯ. ಟಾಪ್ ಆರ್ಡರ್ ಬ್ಯಾಟಿಗರಾದ ಇವರು ಕಳಪೆ ಮೊತ್ತಕ್ಕೆ ಔಟಾಗುತ್ತಿರುವುದಕ್ಕೆ ತಂಡಕ್ಕೆ ದೊಡ್ಡ ಕೊರತೆಯಾಗಿದೆ.
ಅಭಿಷೇಕ್ ಶರ್ಮಾ ಸ್ಪೋಟಕ ಆರಂಭ ನೀಡುತ್ತಾರೆ. ಆದರೆ ಇನ್ನೊಂದು ತುದಿಯಲ್ಲಿ ಗಿಲ್ ಬೇಗ ಔಟಾಗುತ್ತಾರೆ ಇಲ್ಲವೇ ಟೆಸ್ಟ್ ಶೈಲಿಯ ಇನಿಂಗ್ಸ್ ಆಡುತ್ತಾರೆ. ಇದರಿಂದ ಟೀಂ ಇಂಡಿಯಾ ನಿರೀಕ್ಷಿಸಿದ ಮೊತ್ತ ಗಳಿಸಲು ಸಾಧ್ಯವಾಗುತ್ತಿಲ್ಲ. ಅತ್ತ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆದ ಮೇಲೆ ರನ್ ಗಳಿಸುವುದನ್ನೇ ಮರೆತಿದ್ದಾರೆ. ಇದು ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.
ಇಂದಿನ ಪಂದ್ಯಕ್ಕೆ ಮಾತ್ರವಲ್ಲ, ಮುಂಬರುವ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ನಾಯಕ-ಉಪನಾಯಕ ಜೋಡಿ ಫಾರ್ಮ್ ಗೆ ಬರುವುದು ತಂಡಕ್ಕೆ ಮುಖ್ಯವಾಗಿದೆ. ಇಂದಿನ ಪಂದ್ಯಕ್ಕೂ ಟೀಂ ಇಂಡಿಯಾ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಈ ಪಂದ್ಯ ಸಂಜೆ 7 ಗಂಟೆಗೆ ಲಕ್ನೋದ ಏಕನಾ ಮೈದಾನದಲ್ಲಿ ನಡೆಯಲಿದೆ.