ವಿಶಾಖಪಟ್ಟಣಂ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹಿಳೆಯರ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಸೋಲಿನ ಭೀತಿಯಲ್ಲಿದ್ದಾಗ ಭಾರತೀಯ ವಿಕೆಟ್ ಕೀಪರ್ ರಿಚಾ ಘೋಷ್ ಈ ಹಿಂದೆ ರಿಷಬ್ ಪಂತ್ ಟಿ20 ವಿಶ್ವಕಪ್ ಫೈನಲ್ ನಲ್ಲಿ ಮಾಡಿದ್ದಂತೆ ಗಾಯದ ನಾಟಕವಾಡಿದರು. ಆದರೆ ಇದು ಆಫ್ರಿಕನ್ನರಿಗೆ ಸಿಟ್ಟು ತರಿಸಿತು.
ಆಫ್ರಿಕಾ ಗೆಲುವಿಗೆ ಸುಮಾರು 20 ರನ್ ಬೇಕಾಗಿತ್ತು. 47 ನೇ ಓವರ್ ನಲ್ಲಿ ಕ್ರಾಂತಿ ಗೌಡ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಮೊದಲು ನಾಯಕಿ ಹರ್ಮನ್ ಪ್ರೀತ್ ಕೌರ್ ಬೌಲರ್ ಜೊತೆಗೆ ಏನೋ ಮಾತನಾಡಿದರು. ಬಳಿಕ ರಿಚಾ ಘೋಷ್ ಇದ್ದಕ್ಕಿದ್ದಂತೆ ಕಾಲಿನ ಸ್ನಾಯು ಸೆಳೆತವಾದವರಂತೆ ಅಂಗಾತ ಮಲಗಿದರು.
ತಕ್ಷಣವೇ ಫಿಸಿಯೋ ಬಂದು ಚಿಕಿತ್ಸೆ ನೀಡುತ್ತಿದ್ದರು. ಇದೇ ರೀತಿ ರಿಷಬ್ ಪಂತ್ ಕೂಡಾ ಟಿ20 ವಿಶ್ವಕಪ್ ಫೈನಲ್ ನಲ್ಲಿ ಆಫ್ರಿಕಾ ಗೆಲುವಿಗೆ 5 ಓವರ್ ಗಳಲ್ಲಿ 30 ರನ್ ಬೇಕಾಗಿದ್ದಾಗ ಗಾಯದ ನಾಟಕವಾಡಿ ಸೋಲು ತಪ್ಪಿಸಿದ್ದರು. ಈ ರೀತಿ ಪಂದ್ಯಕ್ಕೆ ಅಡಚಣೆಯಾಗುವುದರಿಂದ ಬ್ಯಾಟಿಗರು ವಿಚಲಿತರಾಗುತ್ತಾರೆ ಎನ್ನುವುದು ಇದರ ಹಿಂದಿನ ಉದ್ದೇಶ.
ಆದರೆ ನಿನ್ನೆ ಭಾರತದ ಈ ಪ್ಲ್ಯಾನ್ ವರ್ಕೌಟ್ ಆಗಲಿಲ್ಲ. ಬದಲಾಗಿ ಭಾರತ ಈ ರೀತಿ ಗಾಯದ ನೆಪದಲ್ಲಿ ವಿಳಂಬ ಮಾಡುತ್ತಿರುವುದರ ವಿರುದ್ಧ ಸಿಟ್ಟಾದ ಆಫ್ರಿಕಾ ಬ್ಯಾಟಿಗ ಡಿ ಕ್ಲರ್ಕ್ ಅಂಪಾಯರ್ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.