Publish Date: Wed, 14 Jan 2026 (11:23 IST)
Updated Date: Wed, 14 Jan 2026 (11:25 IST)
ರಾಜ್ ಕೋಟ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಎರಡನೇ ಏಕದಿನ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಘರ್ಜಿಸಿದ್ರು, ಇದೀಗ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಸರದಿ ಎನ್ನುತ್ತಿದ್ದಾರೆ ಫ್ಯಾನ್ಸ್.
ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 93 ರನ್ ಗಳ ನೆರವಿನಿಂದ ಭಾರತ ರೋಚಕ ಗೆಲುವು ಸಾಧಿಸಿತ್ತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆಯಲ್ಲಿದೆ. ಎರಡನೇ ಪಂದ್ಯ ಇಂದು ರಾಜ್ ಕೋಟ್ ನಲ್ಲಿ ನಡೆಯಲಿದೆ.
ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಇನಿಂಗ್ಸ್ ಬೇಗನೇ ಮುಗಿದು ಹೋಗಿತ್ತು. ಆದರೆ ಈ ಪಂದ್ಯದಲ್ಲಿ ಎಂದಿನ ಹಿಟ್ ಮ್ಯಾನ್ ಶೈಲಿಯ ಆಟ ಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದು ಭಾರತ ತಂಡಕ್ಕೂ ಅನಿವಾರ್ಯ. ಇನ್ನೊಂದೆಡೆ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ನಾಯಕ ಶುಭಮನ್ ಗಿಲ್ ರದ್ದೇ ಚಿಂತೆಯ ವಿಷಯ.
ಕಳೆದ ಪಂದ್ಯದಲ್ಲೇ ಶುಭಮನ್ ಪಂದ್ಯದ ನಡುವೆ ಗಾಯಕ್ಕೊಳಗಾಗಿದ್ದರು. ತಿಣುಕಾಡಿ ಅರ್ಧಶತಕ ದಾಖಲಿಸಿದ್ದರು. ಕಳೆದ ಕೆಲವು ಸಮಯದಿಂದ ಶುಭಮನ್ ಗಿಲ್ ಎಂದಿನ ಫಾರ್ಮ್ ಪ್ರದರ್ಶಿಸಿಲ್ಲ. ಹೀಗಾಗಿ ಅವರು ಫಾರ್ಮ್ ಗೆ ಬರುವುದು ಮುಖ್ಯವಾಗಿದೆ.
ಇನ್ನು, ವಾಷಿಂಗ್ಟನ್ ಸುಂದರ್ ಬದಲಿಗೆ ಈ ಪಂದ್ಯದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ. ಈ ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.