ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಂಪಾಯರ್ ಜೊತೆ ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್ ಕಿತ್ತಾಡಿದ ವಿಡಿಯೋ ವೈರಲ್ ಆಗಿದೆ.
ಇಂಗ್ಲೆಂಡ್ ಮೊದಲ ಇನಿಂಗ್ಸ್ ವೇಳೆ ಘಟನೆ ನಡೆದಿದೆ. ಮೊಹಮ್ಮದ್ ಸಿರಾಜ್ ಬೌಲಿಂಗ್ ಮಾಡುತ್ತಿದ್ದಾಗ ಬಾಲ್ ಶೇಪ್ ಸರಿಯಿಲ್ಲ ಎಂದು ಅಂಪಾಯರ್ ಗೆ ದೂರು ನೀಡಿದರು. ಆಗ ಅಂಪಾಯರ್ ಬಾಲ್ ಬಾಕ್ಸ್ ತರಿಸಿ ಹೊಸ ಚೆಂಡು ನೀಡಿದರು.
ಆದರೆ ಹೊಸ ಚೆಂಡಿನಲ್ಲಿ ಒಂದು ಎಸೆತ ಎಸೆದ ಬಳಿಕ ಆ ಚೆಂಡಿನ ಬಗ್ಗೆಯೂ ಸಿರಾಜ್ ಅಪಸ್ವರವೆತ್ತಿದರು. ಇದಕ್ಕೆ ಗಿಲ್ ಕೂಡಾ ಸೇರ್ಪಡೆಯಾದರು. ಅಂಪಾಯರ್ ಬಳಿ ಹೋಗಿ ಈ ಬಾಲ್ ಕೂಡಾ ಬೇಡ ಎಂದು ಅಕ್ಷರಶಃ ವಾಗ್ವಾದ ನಡೆಸಿದರು.
ಆದರೆ ಅಂಪಾಯರ್ ಯಾವುದೇ ಕಾರಣಕ್ಕೂ ಬಾಲ್ ಬದಲಾಯಿಸಲು ಒಪ್ಪಲಿಲ್ಲ. ಈ ವೇಳೆ ಗಿಲ್ ಕೊಂಚ ಕೋಪ ತಾಪದಿಂದ ಅಂಪಾಯರ್ ಜೊತೆ ಮಾತನಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಇದನ್ನು ನೋಡಿ ವಿರಾಟ್ ಕೊಹ್ಲಿಯನ್ನು ನೆನೆಸಿಕೊಂಡಿದ್ದಾರೆ.