ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೀಪಿಂಗ್ ಮಾಡುವಾಗ ಗಾಯಗೊಂಡಿದ್ದ ಟೀಂ ಇಂಡಿಯಾ ಕೀಪರ್ ರಿಷಭ್ ಪಂತ್ ತಂಡಕ್ಕಾಗಿ ನೋವು ನಿವಾರಕ ಸೇವಿಸಿ ಬ್ಯಾಟಿಂಗ್ ಗಿಳಿದಿದ್ದಾರೆ.
ಮೊದಲ ದಿನವೇ ಕೀಪಿಂಗ್ ಮಾಡುವಾಗ ರಿಷಭ್ ಪಂತ್ ಕೈ ಬೆರಳಿಗೆ ಗಾಯವಾಗಿತ್ತು. ಕೆಲವು ಕ್ಷಣಗಳ ನಂತರ ನೋವು ತಡೆಯಲಾರದೇ ಅವರು ಮೈದಾನ ತೊರೆದಿದ್ದರು. ಬಳಿಕ ಕೀಪಿಂಗ್ ಮಾಡಿರಲಿಲ್ಲ. ಅವರ ಬದಲಿಗೆ ಧ್ರುವ ಜ್ಯುರೆಲ್ ಕೀಪರ್ ಆಗಿ ಕಾರ್ಯನಿರ್ವಹಿಸಿದರು.
ಹೀಗಾಗಿ ರಿಷಭ್ ಬ್ಯಾಟಿಂಗ್ ಮಾಡುವರೇ ಎಂಬ ಅನುಮಾನ ಎಲ್ಲರಲ್ಲಿತ್ತು. ಆದರೆ ನಿನ್ನೆಯ ಪರಿಸ್ಥಿತಿಯಲ್ಲಿ ರಿಷಭ್ ಬ್ಯಾಟಿಂಗ್ ಮಾಡುವುದು ತೀರಾ ಅನಿವಾರ್ಯವಾಗಿತ್ತು. ಹೀಗಾಗಿ ಮೈದಾನಕ್ಕೆ ಬರುವ ಮೊದಲು ಅವರು ನೋವು ನಿವಾರಕ ಸೇವಿಸಿದ್ದಾರೆ.
ಅವರು ಪೆವಿಲಿಯನ್ ನಲ್ಲಿ ನೋವು ನಿವಾರಕ ನುಂಗುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಮೊದಲು ಅವರು ನೆಟ್ಸ್ ಗೆ ತೆರಳಿ ಸಹಾಯಕ ಸಿಬ್ಬಂದಿಗಳ ಸಹಾಯದಿಂದ ಬ್ಯಾಟಿಂಗ್ ಮಾಡಲು ಸಾಧ್ಯವೇ ಎಂದು ಅಭ್ಯಾಸ ನಡೆಸಿ ಚೆಕ್ ಮಾಡಿದ್ದರು. ರಿಷಭ್ ಬ್ಯಾಟಿಂಗ್ ಅಭ್ಯಾಸಕ್ಕೆ ತೆರಳುವಾಗ ಇಂಗ್ಲೆಂಡ್ ಪ್ರೇಕ್ಷಕರೂ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.
ನಿನ್ನೆಯ ದಿನದಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ದಿನದಾಟ ಮುಗಿಸಿದೆ. ಕೆಎಲ್ ರಾಹುಲ್ ಅಜೇಯ 53 ಮತ್ತು ರಿಷಭ್ ಪಂತ್ ಅಜೇಯ 19 ರನ್ ಗಳಿಸಿದ್ದಾರೆ. ನೋವಿನಲ್ಲಿದ್ದರೂ ಔಷಧಿ ಸೇವಿಸಿ ತಂಡಕ್ಕಾಗಿ ಆಡಿದ ರಿಷಭ್ ಬದ್ಧತೆಯನ್ನು ಎಲ್ಲರೂ ಕೊಂಡಾಡಿದ್ದಾರೆ.