ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಳೆಯಿಂದ ಐದನೇ ಟೆಸ್ಟ್ ಪಂದ್ಯ ನಡೆಯಲಿದ್ದು ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಮೂರು ಬದಲಾವಣೆ ಮಾಡಲಿರುವುದು ಖಚಿತವಾಗಿದೆ.
ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಯಾಸಕರವಾಗಿ ಡ್ರಾ ಮಾಡಿಕೊಂಡಿತ್ತು. ಹೀಗಾಗಿ ಸರಣಿ ಸೋಲಿನಿಂದ ಸದ್ಯಕ್ಕೆ ಬಚಾವ್ ಆಗಿತ್ತು. ಆದರೆ ಇದೀಗ ಟೀಂ ಇಂಡಿಯಾಕ್ಕೆ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡವಿದೆ. ಒಂದು ವೇಳೆ ಈ ಪಂದ್ಯ ಸೋತರೆ ಟೀಂ ಇಂಡಿಯಾ ಸರಣಿ ಕಳೆದುಕೊಳ್ಳಬೇಕಾಗುತ್ತದೆ. ಡ್ರಾ ಮಾಡಿಕೊಂಡರೂ ಸರಣಿ ಇಂಗ್ಲೆಂಡ್ ಪಾಲಾಗಲಿದೆ. ಯಾಕೆಂದರೆ ಇಂಗ್ಲೆಂಡ್ ಈಗಾಗಲೇ ಸರಣಿಯಲ್ಲಿ 2-1 ರಿಂದ ಮುನ್ನಡೆಯಲ್ಲಿದೆ.
ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಮೂರು ಬದಲಾವಣೆ ಖಚಿತ ಎನ್ನಲಾಗುತ್ತಿದೆ. ಕಳೆದ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಅಂಶುಲ್ ಕಾಂಬೋಜ್ ಸ್ವಲ್ಪವೂ ಪರಿಣಾಮಕಾರಿಯಾಗಲಿಲ್ಲ. ಹೀಗಾಗಿ ಅವರಿಗೆ ಈ ಪಂದ್ಯದಲ್ಲಿ ಕೊಕ್ ಕೊಡುವುದು ಖಚಿತವಾಗಿದೆ. ಅವರ ಸ್ಥಾನಕ್ಕೆ ಆಕಾಶ್ ದೀಪ್ ಅಥವಾ ಅರ್ಷ್ ದೀಪ್ ಸಿಂಗ್ ಗೆ ಅವಕಾಶ ಸಿಗಬಹುದು. ಆಕಾಶ್ ದೀಪ್ ಮತ್ತು ಅರ್ಷ್ ದೀಪ್ ಸಿಂಗ್ ಫಿಟ್ ಆಗಿ ತಂಡಕ್ಕೆ ಬಂದರೆ ಜಸ್ಪ್ರೀತ್ ಬುಮ್ರಾ ಕೂಡಾ ವಿಶ್ರಾಂತಿ ಪಡೆಯಬಹುದು.
ಇನ್ನು ಇಷ್ಟು ದಿನ ತಂಡದಲ್ಲಿದ್ದರೂ ಕುಲದೀಪ್ ಯಾದವ್ ಗೆ ಅವಕಾಶ ನೀಡಲಿಲ್ಲ ಎನ್ನುವುದು ದೊಡ್ಡ ಪ್ರಶ್ನೆಯಾಗಿತ್ತು. ಈ ಪಂದ್ಯದಲ್ಲಿ ಕುಲದೀಪ್ ಯಾದವ್ ಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಹಾಗಿದ್ದಲ್ಲಿ ಶ್ರಾದ್ಧೂಲ್ ಠಾಕೂರ್ ಹೊರಗುಳಿಯಬೇಕಾದೀತು. ಇನ್ನು ಗಾಯಗೊಂಡಿರುವ ರಿಷಭ್ ಪಂತ್ ಬದಲಿಗೆ ಧ್ರುವ ಜ್ಯುರೆಲ್ ಆಡುವುದು ಪಕ್ಕಾ ಆಗಿದೆ.