ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ.
ರೋಹಿತ್ ಶರ್ಮಾ ಬಳಿಕ ರವೀಂದ್ರ ಜಡೇಜಾ ಕೂಡಾ ಶತಕ ಗಳಿಸಿದ್ದಾರೆ. ತವರಿನ ಅಂಗಣದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ ಜಡೇಜಾ 3000 ರನ್ ಕೂಡಾ ಪೂರೈಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಮತ್ತು 3000 ರನ್ ಗಳಿಸಿದ ಮೂರನೇ ಭಾರತೀಯ ಆಟಗಾರ ಎಂಬ ದಾಖಲೆ ಮಾಡಿದರು. ಇದಕ್ಕೆ ಮೊದಲು ರವಿಚಂದ್ರನ್ ಅಶ್ವಿನ್ ಮತ್ತು ಕಪಿಲ್ ದೇವ್ ಈ ಸಾಧನೆ ಮಾಡಿದ್ದರು.
ಇದಕ್ಕೆ ಮೊದಲು ರೋಹಿತ್ ಶರ್ಮಾ ಜೊತೆಗೆ ರವೀಂದ್ರ ಜಡೇಜಾ 204 ರನ್ ಗಳ ಜೊತೆಯಾಟವಾಡಿದರು. ಆದರೆ ರೋಹಿತ್ ಶರ್ಮಾ 131 ರನ್ ಗಳಿಸಿ ಔಟಾದರು. ಬಹಳ ದಿನಗಳ ನಂತರ ಟೆಸ್ಟ್ ಕ್ರಿಕೆಟ್ ನಲ್ಲಿ ಭರ್ಜರಿ ಆಟವಾಡಿದ ರೋಹಿತ್ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು.
ಸರ್ಫರಾಜ್ ಖಾನ್ ಅರ್ಧಶತಕ
ಬಯಸಿ ಬಯಸಿ ಭಾರತ ತಂಡದಲ್ಲಿ ಅವಕಾಶ ಪಡೆದ ಸರ್ಫರಾಜ್ ಖಾನ್ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡು ಅರ್ಧಶತಕ ಸಿಡಿಸಿ ಮಿಂಚಿದರು. 66 ಎಸೆತಗಳಿಂದ 62 ರನ್ ಸಿಡಿಸಿದ ಅವರು ದುರದೃಷ್ಟವಶಾತ್ ರನೌಟ್ ಆದರು. ಆದರೆ ಅವರ ಈ ಇನಿಂಗ್ಸ್ ಗೆ ಮೆಚ್ಚುಗೆ ವ್ಯಕ್ತವಾಯಿತು. ಮಾರ್ಕ್ ವುಡ್ 3 ವಿಕೆಟ್, ಟಾಮ್ ಹಾರ್ಟ್ರ್ಲೀ 1 ವಿಕೆಟ್ ತಮ್ಮದಾಗಿಸಿಕೊಂಡರು.