ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿರುವ ಶುಭಮನ್ ಗಿಲ್ ರನ್ನು ಈ ವಿಚಾರದಲ್ಲಿ ಥೇಟ್ ಕೊಹ್ಲಿನೇ ಎನ್ನುತ್ತಿದ್ದಾರೆ ಫ್ಯಾನ್ಸ್.
ನಾಯಕನಾದ ಮೊದಲ ಸರಣಿಯಲ್ಲೇ ಗಿಲ್ ತಮ್ಮ ನಾಯಕತ್ವದ ಝಲಕ್ ತೋರಿಸುತ್ತಿದ್ದಾರೆ. ರೋಹಿತ್-ಕೊಹ್ಲಿ ನಿವೃತ್ತರಾದ ಬಳಿಕ ಟೀಂ ಇಂಡಿಯಾ ಭವಿಷ್ಯವೇನೋ ಎಂಬ ಚಿಂತೆಯನ್ನು ಅವರು ಒಂದೇ ಸರಣಿಯಿಂದ ಓಡಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಗಿಲ್ ಗಮನ ಸೆಳೆಯುತ್ತಿರುವುದು ಅವರ ಆಕ್ರಮಣಕಾರೀ ಸ್ವಭಾವದಿಂದ. ನಾಯಕನಾಗಿ ಕೊಹ್ಲಿಯೂ ಇದೇ ರೀತಿ ಇದ್ದರು ಎನ್ನುತ್ತಿದ್ದಾರೆ ಫ್ಯಾನ್ಸ್. ಎದುರಾಳಿ ಆಟಗಾರರು ಮೈದಾನದಲ್ಲಿ ಕಿರಿಕ್ ಮಾಡಿದರೆ ಅವರದೇ ಶೈಲಿಯಲ್ಲಿ ಕೊಹ್ಲಿ ತಿರುಗೇಟು ನೀಡುತ್ತಿದ್ದರು. ಇದರಿಂದಾಗಿಯೇ ಅವರ ನಾಯಕತ್ವದಲ್ಲಿ ಟೆಸ್ಟ್ ಮಾದರಿಗೆ ವಿಶೇಷ ಮೆರುಗು ಸಿಕ್ಕಿತ್ತು ಎಂದರೂ ತಪ್ಪಾಗಲಾರದು.
ಇದೀಗ ಗಿಲ್ ಕೂಡಾ ಕೊಹ್ಲಿ ಹಾದಿಯಲ್ಲೇ ಇದ್ದಾರೆ. ಮೂರನೇ ದಿನದಂತ್ಯಕ್ಕೆ ಇಂಗ್ಲೆಂಡ್ ಬ್ಯಾಟಿಗರು ಬೇಕೆಂದೇ ಸಮಯ ಕೊಲ್ಲಲು ಹೊರಟಾಗ ತಾಳ್ಮೆ ಕಳೆದುಕೊಂಡ ಗಿಲ್ ನೇರವಾಗಿ ಇಂಗ್ಲೆಂಡ್ ಆರಂಭಿಕರ ಬಳಿ ತೆರಳಿ ನಿಮ್ಮ ನಾಟಕವೆಲ್ಲಾ ಬೇಡ ಎಂದು ತೋರು ಬೆರಳು ತೋರಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನು ಕೆಲವರು ಟೀಕಿಸಿದ್ದೂ ಇದೆ. ಆದರೆ ಕೊಹ್ಲಿ ಫ್ಯಾನ್ಸ್ ಗಂತೂ ಗಿಲ್ ರ ಈ ವರ್ತನೆ ಇಷ್ಟವಾಗಿದೆ. ಇದು ಹೊಸ ಭಾರತ. ಎದುರಾಳಿ ಆಟಗಾರರು ಏನು ಮಾಡಿದರೂ ನೋಡಿಕೊಂಡು ಸುಮ್ಮನೇ ಕೂರುವವರಲ್ಲ ಎಂದು ಫ್ಯಾನ್ಸ್ ಶಹಬ್ಬಾಶ್ ಗಿರಿ ನೀಡಿದ್ದಾರೆ.