ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೆಎಲ್ ರಾಹುಲ್ ಶತಕಕ್ಕಾಗಿ ರಿಷಭ್ ಪಂತ್ ವಿಕೆಟ್ ತ್ಯಾಗ ಮಾಡಿದಂತಾಗಿದೆ.
ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 387 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿರುವ ಟೀಂ ಇಂಡಿಯಾ ಮೂರನೇ ದಿನದ ಭೋಜನ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ. ನಿನ್ನೆ ಅಜೇಯರಾಗುಳಿದಿದ್ದ ರಿಷಭ್ ಪಂತ್ ಇಂದು ಅರ್ಧಶತಕ ಗಳಿಸಿದರು.
ಆದರೆ ಭೋಜನ ವಿರಾಮಕ್ಕೆ ಕೊನೆಯ ಓವರ್ ನಲ್ಲಿ ರಾಹುಲ್ 98 ರನ್ ಗಳಿಸಿದ್ದರು. ಈ ವೇಳೆ ಸ್ಟ್ರೈಕ್ ಪಂತ್ ಬಳಿಯಿತ್ತು. ರಾಹುಲ್ 2 ರನ್ ಗಳಿಸಲಿ ಎಂದು ಪಂತ್ ಇನ್ನಿಲ್ಲದ ರನ್ ಗೆ ಓಡಲು ಪ್ರಯತ್ನಿಸಿದರು. ಪರಿಣಾಮವಾಗಿ ಬೆನ್ ಸ್ಟೋಕ್ಸ್ ಎಸೆದ ಚೆಂಡಿಗೆ ರನೌಟ್ ಆದರು. ಇದರೊಂದಿಗೆ 74 ರನ್ ಗಳಿಸಿದ್ದ ರಿಷಭ್ ಪೆವಿಲಿಯನ್ ಸೇರುವಂತಾಯಿತು.
ಶತಕ ಗಳಿಸುವ ಧಾವಂತದಲ್ಲಿ ಓಡಿದ ಕೆಎಲ್ ರಾಹುಲ್ ಈಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು. ಶತಕ ಊಟದ ವಿರಾಮದ ನಂತರವೂ ಹೊಡೆಯಬಹುದಿತ್ತು. ಆದರೆ ಅದಕ್ಕಾಗಿ ರಿಷಭ್ ಪಂತ್ ರ ಅಮೂಲ್ಯ ವಿಕೆಟ್ ಕಳೆದುಕೊಳ್ಳುವಂತಾಯಿತಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ ಇನ್ನೂ ಮೊದಲ ಇನಿಂಗ್ಸ್ ನಲ್ಲಿ 139 ರನ್ ಗಳ ಹಿನ್ನಡೆಯಲ್ಲಿದೆ.