Publish Date: Sat, 21 Jun 2025 (16:58 IST)
Updated Date: Sat, 21 Jun 2025 (17:00 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ರಿಷಭ್ ಪಂತ್ ತಾವು ಪಲ್ಟಿ ಸ್ಟಾರ್ ಎಂದು ತೋರಿಸಿಕೊಂಡಿದ್ದಾರೆ. ಅದಕ್ಕೆ ಈ ವಿಡಿಯೋನೇ ಸಾಕ್ಷಿ.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಈಗಾಗಲೇ ಕೇವಲ 3 ವಿಕೆಟ್ ಕಳೆದುಕೊಂಡು 430 ರನ್ ಗಳಿಸಿದ್ದು ಬೃಹತ್ ಮೊತ್ತದತ್ತ ಸಾಗಿದೆ. ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್ ಬಳಿಕ ಈಗ ರಿಷಭ್ ಪಂತ್ ಕೂಡಾ ಇದೇ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದಾರೆ.
ರಿಷಭ್ ಬ್ಯಾಟಿಂಗ್ ಗೆ ಅವರದ್ದೇ ಶೈಲಿಯಿದೆ. ಅಸಂಪ್ರದಾಯಿಕ ಹೊಡೆತಗಳ ಮೂಲಕ ನೋಡುಗರನ್ನು ಚಕಿತಗೊಳಿಸುತ್ತಾರೆ. 90 ರ ಆಸುಪಾಸಿನಲ್ಲಿದ್ದರೂ ರಿಸ್ಕಿ ಶಾಟ್ ಹೊಡೆಯಲು ಹಿಂದೆ ಮುಂದೆ ನೋಡಲ್ಲ. ಇಂದೂ ಕೂಡಾ 99 ರನ್ ಗಳಿಸಿದ್ದಾಗ ಕೇವಲ ಒಂದೇ ಕೈಯಿಂದ ಸಿಕ್ಸರ್ ಸಿಡಿಸಿ ಶತಕ ಪೂರ್ತಿ ಮಾಡಿದ್ದಾರೆ.
ಶತಕ ಪೂರ್ತಿಯಾದ ಬೆನ್ನಲ್ಲೇ ರಿಷಭ್ ಕೈಯಲ್ಲಿದ್ದ ಗ್ಲೌಸ್, ಬ್ಯಾಟ್ ಕೆಳಗೆ ಹಾಕಿ ಒಂದು ಪಲ್ಟಿ ಹೊಡೆದು ವಿಶಿಷ್ಟವಾಗಿ ಸಂಭ್ರಮಿಸಿದ್ದಾರೆ. ಇಂತಹದ್ದೊಂದು ಶೈಲಿಯನ್ನು ಅವರು ಐಪಿಎಲ್ ನಿಂದ ಶುರು ಮಾಡಿದ್ದಾರೆ. ಈ ಹಿಂದೆ ಐಪಿಎಲ್ ನಲ್ಲಿ ಶತಕ ಸಿಡಿಸಿದಾಗ ಮೊದಲ ಬಾರಿಗೆ ಈ ರೀತಿ ಪಲ್ಟಿ ಹೊಡೆದು ಸಂಭ್ರಮಿಸಿದ್ದರು. ಇದೀಗ ಇಂದೂ ಕೂಡಾ ಇದೇ ರೀತಿ ಸೆಲೆಬ್ರೇಟ್ ಮಾಡುವ ಮೂಲಕ ಪಲ್ಟಿ ಸ್ಟಾರ್ ಎಂದು ನಿರೂಪಿಸಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ.