ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಯಾಗಿದ್ದ ವೇಗಿ ಆಕಾಶ್ ದೀಪ್ ಕೌಟುಂಬಿಕ ಹಿನ್ನಲೆ ಕೇಳಿದ್ರೆ ನಿಜಕ್ಕೂ ಕಣ್ಣೀರೇ ಬರುತ್ತದೆ.
ಈ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 4,, ಎರಡನೇ ಇನಿಂಗ್ಸ್ 6 ವಿಕೆಟ್ ಕಬಳಿಸಿ ಮಿಂಚಿದ್ದ ಆಕಾಶ್ ದೀಪ್ ಪಂದ್ಯದ ನಂತರ ತನ್ನ ಅಮೋಘ ಪ್ರದರ್ಶನವನ್ನು ಸಹೋದರಿಗೆ ಅರ್ಪಿಸಿದ್ದಾರೆ. ಚೇತೇಶ್ವರ ಪೂಜಾರ ಜೊತೆಗೆ ನಡೆಸಿದ ಚಿಟ್ ಚ್ಯಾಟ್ ನಲ್ಲಿ ಅವರು ಇದನ್ನು ಹೇಳಿದ್ದಾರೆ.
ನನ್ನ ಸಹೋದರಿ ಕಳೆದ ಎರಡು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾಳೆ. ಅವಳಿಗೆ ನನ್ನ ಈ ಪ್ರದರ್ಶನವನ್ನು ಅರ್ಪಿಸುತ್ತಿದ್ದೇನೆ ಎಂದಿದ್ದಾರೆ. ನಾನು ಇದುವರೆಗೆ ಇದರ ಬಗ್ಗೆ ಯಾರೊಂದಿಗೂ ಹೇಳಿಲ್ಲ. ಆದರೆ ಎರಡು ತಿಂಗಳ ಹಿಂದೆ ನನ್ನ ಸಹೋದರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ನನ್ನ ಈ ಪ್ರದರ್ಶನದಿಂದ ಅವರಿಗೆ ತುಂಬಾ ಸಂತೋಷವಾಗಿರಬಹುದು. ಅವರ ಮುಖದಲ್ಲಿ ನಗು ಮೂಡಿರಬಹುದು ಎಂದು ಆಕಾಶ್ ದೀಪ್ ಭಾವಕರಾಗಿ ಹೇಳಿದ್ದಾರೆ.
ನಾನು ಚೆಂಡು ಕೈಗೆತ್ತಿಕೊಂಡಾಗಲೆಲ್ಲಾ ಪ್ರತೀ ಬಾರಿ ನನಗೆ ಅವಳ ನೆನಪಾಗುತ್ತಿತ್ತು. ಈ ಪ್ರದರ್ಶನ ಅವಳಿಗೆ ಅರ್ಪಣೆ, ಅವಳ ಜೊತೆ ನಾವಿದ್ದೇವೆ ಎಂದು ಹೇಳಲು ಬಯಸುತ್ತೇನೆ ಎಂದಿದ್ದಾರೆ ಆಕಾಶ್ ದೀಪ್.