ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಈಗ ಟಿ20 ಕ್ರಿಕೆಟ್ ನ ರೋಚಕತೆ ಬಂದಿದೆ. ಅದಕ್ಕೆ ಕಾರಣ ಟೀಂ ಇಂಡಿಯಾದ ಆಟದ ವೈಖರಿ.
ಮಳೆಯಿಂದಾಗಿ ಮೂರು ದಿನದ ಆಟ ನಷ್ಟವಾದಾಗ ಎಲ್ಲರೂ ಈ ಪಂದ್ಯ ನೀರಸ ಡ್ರಾನತ್ತ ಸಾಗಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಅದರೆ ಪಂದ್ಯ ಗೇರ್ ಬದಲಾಯಿಸಿ ರೋಚಕತೆ ತಂದಿತ್ತಿದ್ದು ರೋಹಿತ್ ಪಡೆ. ಮೊದಲ ಇನಿಂಗ್ಸ್ ನಲ್ಲಿ ಬಾಂಗ್ಲಾ 233 ಕ್ಕೆ ಆಲೌಟ್ ಆದಾಗ ಕೇವಲ ಅಪರಾಹ್ನದ ಸೆಷನ್ ನಲ್ಲಿ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿ ಇನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾತು. ಇದಕ್ಕೆ ಪ್ರತಿಯೊಬ್ಬ ಬ್ಯಾಟಿಗನ ಕೊಡುಗೆಯೂ ಪ್ರಮುಖವಾಗಿತ್ತು.
ಆದರೆ ದಿನದಂತ್ಯಕ್ಕೆ ಎರಡನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ ಜಿಗುಟಿನ ಆಟವಾಡಿ ಡ್ರಾಗೆ ಪ್ರಯತ್ನಿಸಿತು. ಆದರೆ ಭಾರತೀಯ ಅನುಭವಿ ಬೌಲರ್ ಗಳು ಇದರೆಲ್ಲೆಲ್ಲಾ ಪಂಟರ್ ಗಳು. ಅನನುಭವಿ ಬಾಂಗ್ಲಾ ಬ್ಯಾಟಿಗರನ್ನು ಹೇಗೆ ಕಟ್ಟಿಹಾಕಬೇಕೆಂದು ಅಶ್ವಿನ್ ನಂತಹ ಅನುಭವಿಗೆ ಹೇಳಿಕೊಡಬೇಕೇ? 11 ಓವರ್ ಗಳ ಆಟ ನಿಭಾಯಿಸಿದ ಬಾಂಗ್ಲಾ ಈಗಾಗಲೇ 2 ವಿಕೆಟ್ ಕಳೆದುಕೊಂಡಿದ್ದು 26 ರನ್ ಗಳ ಹಿನ್ನಡೆಯಲ್ಲಿದೆ.
ಇದೀಗ ಇಂದು ಒಂದೇ ದಿನ ಪಂದ್ಯ ಬಾಕಿಯಿದೆ. ಬಾಂಗ್ಲಾವನ್ನು 150 ರನ್ ಒಳಗೇ ಆಲೌಟ್ ಮಾಡುವ ಗುರಿ ಭಾರತದ್ದು. ಕೇವಲ 2 ಗಂಟೆ ಬ್ಯಾಟಿಂಗ್ ಸಿಕ್ಕರೂ ಸಾಕು. ಈ ಮೊತ್ತವನ್ನು ದಾಟಿ ಐತಿಹಾಸಿಕ ಗೆಲುವು ದಾಖಲಿಸಲಿದೆ. ಇದಕ್ಕಾಗಿ ಭಾರತದ ಟ್ರಂಪ್ ಕಾರ್ಡ್ ಬೌಲರ್ ಎಂದರೆ ರವಿಚಂದ್ರನ್ ಅಶ್ವಿನ್. ಅಶ್ವಿನ್ ಈಗಾಗಲೇ ಬಾಂಗ್ಲಾದ 2 ವಿಕೆಟ್ ಕಬಳಿಸಿದ್ದಾರೆ. ಅವರ ಚಾಣಕ್ಷ್ಯ ಬೌಲಿಂಗ್ ನ್ನು ಎದುರಿಸಿ ನಿಲ್ಲುವುದು ಅಷ್ಟು ಸುಲಭವಲ್ಲ.ಹೀಗಾಗಿ ಇಂದು ಭಾರತದ ಗೆಲುವು ಅಶ್ವಿನ್ ಕೈಯಲ್ಲಿದೆ ಎಂದರೂ ತಪ್ಪಾಗಲಾರದು.