Publish Date: Sat, 28 Sep 2024 (14:15 IST)
Updated Date: Sat, 28 Sep 2024 (14:18 IST)
ಕಾನ್ಪುರ: ಭಾರತ ಮತ್ತು ಬಾಂಗ್ಲಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಒಂದೂ ಎಸೆತ ಕಾಣದೇ ರದ್ದಾಗಿದೆ. ನಾಳೆಗೆ ಪಂದ್ಯ ಮುಂದುವರಿಯಲಿದೆ.
ಕಾನ್ಪುರದಲ್ಲಿ ನಿನ್ನೆಯಿಂದ ಮಳೆಯ ಅಡಚಣೆಯ ನಡುವೆಯೇ ಪಂದ್ಯ ಸಾಗುತ್ತಿದೆ. ನಿನ್ನೆ ತಡವಾಗಿ ಆರಂಭವಾಗಿದ್ದ ದಿನದಾಟ ಬೇಗನೇ ಮುಗಿದಿತ್ತು. ಇಂದು ಮತ್ತೆ ಬೆಳಿಗ್ಗೆಯೇ ಧಾರಾಕಾರ ಮಳೆ ಸುರಿಯುತ್ತಿದ್ದರಿಂದ ಮೈದಾನ ಸಿಬ್ಬಂದಿಗಳಿಗೆ ಕವರ್ ತೆಗೆಯಲೂ ಸಾಧ್ಯವಾಗಲಿಲ್ಲ.
ಹೀಗಾಗಿ ಮೈದಾನಕ್ಕೆ ಬಂದ ಆಟಗಾರರು ಹಾಗೆಯೇ ಹೋಟೆಲ್ ರೂಂಗೆ ಮರಳಿದರು. ಹಾಗಿದ್ದರೂ ಮೈದಾನ ಸಿಬ್ಬಂದಿ ಪಂದ್ಯಕ್ಕೆ ಅಣಿಮಾಡಿಕೊಡಲು ಪ್ರಯತ್ನ ನಡೆಸಿದರು. ಆದರೆ ಆಗಾಗ ಮಳೆ ಕಾಡುತ್ತಿದ್ದರಿಂದ ಮೈದಾನಕ್ಕೆ ಹಾಕಿದ ಹೊದಿಕೆ ಜಲಾವೃತವಾಗಿತ್ತು. ಜೊತೆಗೆ ಪದೇ ಪದೇ ಮಳೆ ಹನಿಯುತ್ತಲೇ ಇತ್ತು.
ಸಾಕಷ್ಟು ಹೊತ್ತು ಕಾದು, ಮೈದಾನ ಹಾಗೂ ಹವಾಮಾನ ಪರಿಶೀಲಿಸಿದ ಅಂಪಾಯರ್ ಗಳು ಕೊನೆಗೆ ಇಂದಿನ ದಿನದಾಟವನ್ನು ರದ್ದುಗೊಳಿಸಲು ತೀರ್ಮಾನಿಸಿದರು. ನಿನ್ನೆಯ ದಿನದಾಟದಲ್ಲಿ 35 ಓವರ್ ಆಟ ನಡೆದಿದ್ದು ಬಾಂಗ್ಲಾದೇಶ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು.