ಕಾನ್ಪುರ: ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಲು ಶತಪ್ರಯತ್ನ ನಡೆಸುತ್ತಿದೆ. ಇದು ಕೆಲವರಿಗೆ ಅಚ್ಚರಿ ತಂದಿರಬಹುದು. ಆದರೆ ಇದಕ್ಕೆ ಕಾರಣವೂ ಇದೆ.
ಹೇಗಿದ್ದರೂ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಹೀಗಾಗಿ ಒಂದು ವೇಳೆ ಈ ಪಂದ್ಯ ಡ್ರಾ ಆದರೂ ಸರಣಿ ಕಳೆದುಕೊಳ್ಳುವ ಚಾನ್ಸ್ ಇಲ್ಲ. ಹಾಗಿದ್ದರೂ ಟೀಂ ಇಂಡಿಯಾ ಡ್ರಾಗಾಗಿ ಆಡದೇ ಗೆಲುವಿಗಾಗಿ ಪ್ರಯತ್ನ ನಡೆಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಇದಕ್ಕೆ ಕಾರಣವೂ ಇದೆ. ಸದ್ಯಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ನಂ.1 ಸ್ಥಾನದಲ್ಲಿದೆ. ಬಾಂಗ್ಲಾದೇಶ ಸರಣಿ ತನ್ನ ಅಂಕ ಮತ್ತಷ್ಟು ಉತ್ತಮಪಡಿಸಲು ಭಾರತಕ್ಕೆ ಸುವರ್ಣಾವಕಾಶ. ಇದಾದ ಬಳಿಕ ನ್ಯೂಜಿಲೆಂಡ್, ಆಸ್ಟ್ರೇಲಿಯಾದಂತಹ ಕಠಿಣ ಎದುರಾಳಿಗಳ ವಿರುದ್ಧ ಆಡಬೇಕಿದೆ. ಈ ಪಂದ್ಯ ಡ್ರಾ ಆದರೆ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಿಂದ ಸರಣಿ ಗೆಲ್ಲಬೇಕಾದ ಒತ್ತಡ ಎದುರಾಗಲಿದೆ.
ಹೀಗಾಗಿ ಬಾಂಗ್ಲಾ ವಿರುದ್ಧ ಗೆದ್ದು ಅಂಕ ಸುಧಾರಿಸಿಕೊಂಡರೆ ದೊಡ್ಡ ತಲೆನೋವು ತಪ್ಪುತ್ತದೆ. ನಂ.1 ಸ್ಥಾನ ಮತ್ತಷ್ಟು ಭದ್ರವಾಗುತ್ತದೆ. ನಾಯಕರಾಗಿ ರೋಹಿತ್ ಶರ್ಮಾಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆಲ್ಲುವ ಗುರಿಯಿದೆ. ಭಾರತ ಸತತವಾಗಿ ಎರಡು ಬಾರಿ ಫೈನಲ್ ಗೇರಿಯೂ ಗೆಲುವು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಕಪ್ ಪಡೆದೇ ತೀರುವ ಜಿದ್ದಿಗೆ ಬಿದ್ದಿರುವ ಭಾರತ ಈ ಪಂದ್ಯವನ್ನು ಗೆಲ್ಲುವ ಗುರಿಯೊಂದಿಗೆ ಆಡುತ್ತಿದೆ.