ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಇಂದು ಟೀಂ ಇಂಡಿಯಾ ಬೌಲರ್ ಗಳು ಎದುರಾಳಿಗಳ ವಿಕೆಟ್ ಕಬಳಿಸಲು ಏನೆಲ್ಲಾ ತಂತ್ರ ಹೂಡುತ್ತಿದ್ದಾರೆ. ಈ ನಡುವೆ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಲಬುಶೇನ್ ನಡುವಿನ ಬೇಲ್ಸ್ ಬದಲಾವಣೆ ಆಟ ಎಲ್ಲರ ನಗುವಿಗೆ ಕಾರಣವಾಗಿದೆ.
ಕ್ರಿಕೆಟಿಗರಲ್ಲಿ ಒಂದು ನಂಬಿಕೆಯಿದೆ. ಏನೇ ಮಾಡಿದರೂ ವಿಕೆಟ್ ಉರುಳುತ್ತಿಲ್ಲ ಎನಿಸಿದಾಗ ಬೌಲರ್ ಗಳು ಬೇಲ್ಸ್ ಗಳನ್ನು ಅದಲು ಬದಲು ಮಾಡಿದರೆ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆ. ಈ ಹಿಂದೆ ವಿರಾಟ್ ಕೊಹ್ಲಿ ಈ ರೀತಿ ಮಾಡಿದ್ದರಿಂದ ಟೀಂ ಇಂಡಿಯಾ ಸಕ್ಸಸ್ ಸಿಕ್ಕಿದ್ದು ಗೊತ್ತಿರಬಹುದು.
ಇಂದು ಮೊಹಮ್ಮದ್ ಸಿರಾಜ್ ಕೂಡಾ ಅದೇ ಕೆಲಸ ಮಾಡಿದ್ದಾರೆ. ವಿಕೆಟ್ ಮೇಲಿನ ಎರಡು ಬೇಲ್ಸ್ ಗಳನ್ನು ಅತ್ತಿತ್ತ ಸ್ಥಳ ಬದಲಾಯಿಸಿ ಇಟ್ಟು ಸಿರಾಜ್ ತೆರಳಿದರು. ಇದನ್ನು ನೋಡುತ್ತಾ ನಿಂತಿದ್ದ ಆಸ್ಟ್ರೇಲಿಯಾ ಬ್ಯಾಟಿಗ ಲಬುಶೇನ್ ಸಿರಾಜ್ ಅತ್ತ ತೆರಳುತ್ತಿದ್ದಂತೇ ಮತ್ತೆ ಬೇಲ್ಸ್ ನ್ನು ಮೊದಲಿನಂತೆಯೇ ಇಟ್ಟಿದ್ದಾರೆ.
ಈ ಫನ್ನಿ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಕೊನೆಗೂ ಈ ಪಂದ್ಯದಲ್ಲಿ ಲಬುಶೇನ್ 12 ರನ್ ಗಳಿಸಿ ನಿತೀಶ್ ರೆಡ್ಡಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ಆಸ್ಟ್ರೇಲಿಯಾ ಇತ್ತೀಚೆಗಿನ ವರದಿ ಬಂದಾಗ 3 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ.