ದುಬೈ: ಒಬ್ಬ ಚಾಂಪಿಯನ್ ಪ್ಲೇಯರ್ ಹೇಗೆ ಆಡಬೇಕು ಎಂಬುದನ್ನು ವಿರಾಟ್ ಕೊಹ್ಲಿ ಇಂದು ತೋರಿಸಿಕೊಟ್ಟರು. ಆಸ್ಟ್ರೇಲಿಯಾ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಗೆಲ್ಲಲು ತಾವೇ ಟೊಂಕಕಟ್ಟಿ ನಿಂತರು.
ಐಸಿಸಿ ಟ್ರೋಫಿಗಳಲ್ಲಿ ಗುಮ್ಮನಾಗಿ ಕಾಡುತ್ತಿದ್ದ ಆಸ್ಟ್ರೇಲಿಯಾಗೆ ಈ ಬಾರಿ ಕೊನೆಗೂ ಭಾರತ ಸೋಲುಣಿಸುವಲ್ಲಿ ಯಶಸ್ವಿಯಾಯಿತು. ಸೆಮಿಫೈನಲ್ ಪಂದ್ಯವನ್ನು 4 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಫೈನಲ್ ಗೇರಿತು. ಈ ಮೂಲಕ ಕಳೆದ ಏಕದಿನ ವಿಶ್ವಕಪ್ ಫೈನಲ್ ಸೋಲಿಗೂ ಸೇಡು ತೀರಿಸಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 264 ರನ್ ಗಳಿಗೆ ಆಲೌಟ್ ಆಯಿತು. ಈ ಮೊತ್ತ ಬೆನ್ನತ್ತಿದ ಭಾರತಕ್ಕೆ ರೋಹಿತ್ ಶರ್ಮಾ-ಗಿಲ್ ಆರಂಭದಲ್ಲೇ ಕೈಕೊಟ್ಟರು. ರೋಹಿತ್ ಎಂದಿನಂತೆ ಬಿರುಸಾಗಿ 28 ರನ್ ಗಳಿಸಿ ಔಟಾದರೆ ಉತ್ತಮ ಫಾರ್ಮ್ ನಲ್ಲಿದ್ದ ಗಿಲ್ ಇಂದು ಕೇವಲ 8 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಆದರೆ ಆ ಬಳಿಕ ಭಾರತಕ್ಕೆ ಆಸರೆಯಾಗಿದ್ದು ಕೊಹ್ಲಿ-ಶ್ರೇಯಸ್ ಅಯ್ಯರ್ ಜೋಡಿ. ಶ್ರೇಯಸ್ ಮತ್ತೊಂದು ಸೊಗಸಾದ ಇನಿಂಗ್ಸ್ ಕಟ್ಟಿದರು. ಆದರೆ 45 ರನ್ ಗಳಿಗೆ ಔಟಾಗಿ ನಿರಾಸೆಪಟ್ಟುಕೊಂಡರು.
ಆದರೆ ವಿರಾಟ್ ಮಾತ್ರ ಪಿಚ್ ನ್ನು ಅರೆದು ಕುಡಿದವರಂತೆ ಬ್ಯಾಟಿಂಗ್ ಮಾಡಿದರು. ಸಿಂಗಲ್ಸ್ ಮೂಲಕವೇ ತಂಡದ ರನ್ ಗತಿಯೂ ಕಡಿಮೆಯಾಗದಂತೆ ನೋಡಿಕೊಂಡರು. ಅವರಿಗೆ ಮತ್ತೊಮ್ಮೆ ಸಾಥ್ ಕೊಟ್ಟವರು ಅಕ್ಸರ್ ಪಟೇಲ್. ಆದರೆ ಅವರು 27 ರನ್ ಗಳಿಗೆ ಔಟಾದಾಗ ಕೆಎಲ್ ರಾಹುಲ್ ಸಾಥ್ ಕೊಟ್ಟರು. ರಾಹುಲ್ ಕೊನೆಯವರೆಗೂ 42 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಲ್ಲದೆ ತಮ್ಮ ಆಯ್ಕೆ ಪ್ರಶ್ನಿಸಿವವರಿಗೂ ಉತ್ತರ ಕೊಟ್ಟರು. ಹಾಗಿದ್ದರೂ ಒಂದು ಹಂತದಲ್ಲಿ ಬಾಲ್ ಟು ಬಾಲ್ ಎನ್ನುವ ಸ್ಥಿತಿಯಲ್ಲಿದ್ದಾಗ ಹಾರ್ದಿಕ್ ಪಾಂಡ್ಯ ಮೂರು ಸಿಕ್ಸರ್ ಸಿಡಿಸಿ ಗೆಲುವು ಖಚಿತಪಡಿಸಿದರು. ಅಂತಿಮವಾಗಿ ಅವರು 28 ರನ್ ಗಳಿಗೆ ಔಟಾದರು. ಅಂತಿಮವಾಗಿ ಭಾರತ 48.1 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿತು. ಈ ಮೂಲಕ ಈ ಗೆಲುವಿಗೆ ಪ್ರತಿಯೊಬ್ ಭಾರತೀಯ ಆಟಗಾರನ ಕೊಡುಗೆಯೂ ಮುಖ್ಯವಾಗಿತ್ತು. ಆಸ್ಟ್ರೇಲಿಯಾವನ್ನು ಸೋಲಿಸಿದ ಸಂಭ್ರಮ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನ ಮುಖದಲ್ಲಿತ್ತು.