ದುಬೈ: 2023 ರಿಂದ ಕೆಎಲ್ ರಾಹುಲ್ ಹೊತ್ತಿದ್ದ ಸ್ವಾರ್ಥಿ ಎಂಬ ಪಟ್ಟವನ್ನು ಇಂದು ಕಿತ್ತು ಬಿಸಾಕಿದರು. ಅಂದು ತಮ್ಮದಲ್ಲದ ತಪ್ಪಿಗೆ ಹೊಣೆ ಮಾಡಿದ್ದವರಿಗೆ ಇಂದು ಮತ್ತೊಂದು ಇನಿಂಗ್ಸ್ ಮೂಲಕ ತಕ್ಕ ಉತ್ತರ ಕೊಟ್ಟರು.
ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಕೆಎಲ್ ರಾಹುಲ್ ನಿಧಾನಗತಿಯ ಇನಿಂಗ್ಸ್ ಆಡಿದ್ದನ್ನೇ ಇದುವರೆಗೂ ಅವರ ಟೀಕಾಕಾರರು ಪದೇ ಪದೇ ಉಲ್ಲೇಖಿಸಿ ಅವರನ್ನು ಸ್ವಾರ್ಥಿ ಎನ್ನುತ್ತಲೇ ಇದ್ದರು. ಅಷ್ಟಕ್ಕೂ ಅಂದು ಅವರು ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದಾಗ ಅಂತಹದ್ದೊಂದು ಇನಿಂಗ್ಸ್ ಆಡಲೇಬೇಕಿತ್ತು. ಆದರೆ ಅವರದಲ್ಲದ ತಪ್ಪಿಗೆ ಅವರನ್ನು ಹೊಣೆ ಮಾಡಲಾಯಿತು. ಭಾರತ ಕಳಪೆ ಮೊತ್ತ ಗಳಿಸಿದ್ದಕ್ಕೆ ಅವರನ್ನೇ ಹೊಣೆ ಮಾಡಲಾಯಿತು.
ಈ ಚಾಂಪಿಯನ್ಸ್ ಟ್ರೋಫಿಯಲ್ಲೂ ನಿನ್ನೆಯವರೆಗೂ ರಾಹುಲ್ ಯಾಕೆ, ರಿಷಭ್ ಪಂತ್ ರನ್ನು ಆಯ್ಕೆ ಮಾಡಬೇಕಿತ್ತು, ರಾಹುಲ್ ಸ್ವಾರ್ಥಿ, ನಿಷ್ಪ್ರಯೋಜಕ ಎಂದು ಜರಿಯುತ್ತಲೇ ಇದ್ದರು. ಆದರೆ ನಿನ್ನೆಯ ಒಂದು ಇನಿಂಗ್ಸ್ ನಿಂದ ಕೆಎಲ್ ರಾಹುಲ್ ತಾವು ಏನೆಂದು ವಿಶ್ವಕ್ಕೇ ತೋರಿಸಿಕೊಟ್ಟರು.
ಈ ಟೂರ್ನಮೆಂಟ್ ಆರಂಭವಾದಾಗ ವಿಕೆಟ್ ಕೀಪರ್, ಬ್ಯಾಟಿಗನಾಗಬೇಕಿತ್ತು. ಆ ಜವಾಬ್ಧಾರಿ ನಿಭಾಯಿಸಿದರು. ತಂಡಕ್ಕೆ ಅಗತ್ಯ ಬಂದಾಗ ಕೆಳ ಕ್ರಮಾಂಕದಲ್ಲಿ ಇಲ್ಲದಿದ್ದಾಗ ಮೇಲಿನ ಕ್ರಮಾಂಕದಲ್ಲಿ ಆಡಬೇಕಿತ್ತು. ಅದನ್ನೂ ಮಾಡಿದರು. ನಿನ್ನೆಯ ಪಂದ್ಯದಲ್ಲಿ ಕ್ರೀಸ್ ಗೆ ಬಂದಾಗ ರಾಹುಲ್ ಸಾರಥಿಯ ಪಾತ್ರ ಮಾಡಬೇಕಿತ್ತು. ಅದನ್ನು ಮಾಡಿದರು. ಕೊನೆಯಲ್ಲಿ ಪಂದ್ಯ ಗೆಲ್ಲಿಸುವ ಹೊಣೆ ಹೊರಬೇಕಿತ್ತು. ಅದನ್ನೂ ಯಶಸ್ವಿಯಾಗಿ ನಿಭಾಯಿಸಿದರು. ಹೀಗಾಗಿಯೇ ಕೊನೆಯಲ್ಲಿ ಗೆದ್ದಾಗ ಅವರು ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ಸಾಮಾನ್ಯವಾಗಿ ರಾಹುಲ್ ರಿಂದ ಈ ವರ್ತನೆ ಅಪರೂಪ. ಆದರೆ ನಿನ್ನೆ ಪಂದ್ಯ ಗೆಲ್ಲಿಸಿದ ಮೇಲೆ ಅವರಿಗೆ ಕಳೆದ ಏಕದಿನ ವಿಶ್ವಕಪ್ ಫೈನಲ್ ಇನಿಂಗ್ಸ್ ನಿಂದ ಇದುವರೆಗೂ ತಮ್ಮನ್ನು ಟೀಕಿಸುತ್ತಿದ್ದವರ ಮಾತು ನೆನಪಾಗಿರಬೇಕು. ಅದೇನೇ ಇರಲಿ, ನಮ್ಮ ಕನ್ನಡಿಗ ರಾಹುಲ್ ಅದು ಕೆಎಲ್ ಆಗಿರಲಿ, ದ್ರಾವಿಡ್ ಆಗಿರಲಿ, ರಾಹುಲ್ ಎಂಬ ಕನ್ನಡಿಗ ಯಾವತ್ತೂ ತಂಡಕ್ಕಾಗಿ ಆಡುವವರು ಎಂಬ ಹರ್ಷ ಭೋಗ್ಲೆ ಮಾತು ಸತ್ಯವಾಗಿದೆ.