ದುಬೈ: ರಾಂಚಿಯಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದ ವೇಗಿ ಹರ್ಷಿತ್ ರಾಣಾ ಅವರಿಗೆ ಅಧಿಕೃತವಾಗಿ ವಾಗ್ದಂಡನೆ ವಿಧಿಸಲಾಗಿದೆ.
ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ನ 22ನೇ ಓವರ್‌ನಲ್ಲಿ ಡೆವಾಲ್ಡ್ ಬ್ರೆವಿಸ್ ಅವರನ್ನು ಔಟ್ ಮಾಡಿದ ಬಳಿಕ ರಾಣಾ ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುವಂತೆ ಸನ್ನೆ ಮಾಡಿದ್ದರು.ಇದು ಸಂಭಾವ್ಯವಾಗಿ ಪ್ರಚೋದನಕಾರಿ ಎಂದು ಪರಿಗಣಿಸಿರುವ ಐಸಿಸಿ ವಾಗ್ದಂಡನೆ ಮತ್ತು ಡಿಮೆರಿಟ್ ಅಂಕ ನೀಡಲಾಗಿದೆ.
ಅವಮಾನಕರ ಅಥವಾ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳ ಬಳಕೆಯನ್ನು ನಿರ್ವಹಿಸುವ ಸಂಹಿತೆಯ 2.5 ನೇ ವಿಧಿಯ ಅಡಿಯಲ್ಲಿ ರಾಣಾ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಈ ಶಿಕ್ಷೆಯು ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ಒಳಗೊಂಡಿದೆ.
ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮಾನಸಪುತ್ರಿನಂತಿರುವ ರಾಣಾ ಅವರು ತನ್ನ ಮೇಲಿನ ಆರೋಪ ಮತ್ತು ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಪ್ರಸ್ತಾಪಿಸಿದ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ.
ಒಬ್ಬ ಆಟಗಾರ 24 ತಿಂಗಳ ಅವಧಿಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಪಾಯಿಂಟ್‌ಗಳನ್ನು ತಲುಪಿದಾಗ, ಅವುಗಳನ್ನು ಅಮಾನತು ಪಾಯಿಂಟ್‌ಗಳಾಗಿ ಪರಿವರ್ತಿಸಲಾಗುತ್ತದೆ ಮತ್ತು ಆಟಗಾರನನ್ನು ನಿಷೇಧಿಸಲಾಗುತ್ತದೆ. ಎರಡು ಅಮಾನತು ಪಾಯಿಂಟ್‌ಗಳು ಒಂದು ಟೆಸ್ಟ್ ಅಥವಾ ಎರಡು ಏಕದಿನ ಅಥವಾ ಎರಡು ಟಿ20 ಪಂದ್ಯಗಳಿಂದ ನಿಷೇಧಕ್ಕೆ ಸಮನಾಗಿರುತ್ತದೆ.