Publish Date: Wed, 13 Mar 2024 (16:36 IST)
Updated Date: Wed, 13 Mar 2024 (16:39 IST)
ಮುಂಬೈ: ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಅನುಮಾನ ಎಂಬ ವರದಿಗಳ ಬೆನ್ನಲ್ಲೇ ಪಾಕ್ ಮಾಜಿ ಕ್ರಿಕೆಟಿಗ ದನೇಶ್ ಕನೇರಿಯಾ ಬೇಸರ ವ್ಯಕ್ತಪಡಿಸಿದ್ದಾರೆ.
ಜೂನ್ ನಲ್ಲಿ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದಲ್ಲಿ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಸ್ಥಾನ ಸಿಗುವುದು ಅನುಮಾನ ಎಂಬ ವರದಿ ಸಂಚಲನ ಮೂಡಿಸಿದೆ. ಅವರ ಅಭಿಮಾನಿಗಳು ಈಗಾಗಲೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ದನೇಶ್ ಕನೇರಿಯಾ ವಿರಾಟ್ ಕೊಹ್ಲಿಯಂತಹ ಆಟಗಾರರನ್ನು ಕಡೆಗಣಿಸಲು ನಿಮಗೆ ಮನಸ್ಸಾದ್ರೂ ಹೇಗೆ ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೊಹ್ಲಿಯನ್ನು ತಂಡದಿಂದ ಕೈ ಬಿಡುವ ಪರಿಸ್ಥಿತಿ ಬಂದಿಲ್ಲ. ಅವರನ್ನು ಇಟ್ಟುಕೊಂಡೇ ಹೊಸ ಆಟಗಾರರನ್ನು ಬೆಳೆಸಿ. ಕೊಹ್ಲಿ ಈಗಲೂ ರನ್ ಗಳಿಸುತ್ತಿದ್ದಾರೆ. ಅವರನ್ನು ಕಡೆಗಣಿಸಲು ಹೇಗೆ ಸಾಧ‍್ಯ? ಎಂದಿದ್ದಾರೆ.
ಟಿ20 ವಿಶ್ವಕಪ್ ನಡೆಯುವ ಅಮೆರಿಕಾ, ವೆಸ್ಟ್ ಇಂಡೀಸ್ ನಲ್ಲಿ ನಿಧಾನಗತಿಯ ಪಿಚ್ ಇರಲಿದೆ. ಇದು ವಿರಾಟ್ ಕೊಹ್ಲಿ ಬ್ಯಾಟಿಂಗ್ ಗೆ ಸೂಕ್ತವಲ್ಲ ಎಂಬ ನೆಪವೊಡ್ಡಿ ಅವರನ್ನು ತಂಡದಿಂದ ಹೊರಹಾಕುವ ಬಗ್ಗೆ ವರದಿಗಳು ಕೇಳಿಬರುತ್ತಿವೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.