ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಬಗ್ಗೆ ಧನಶ್ರೀ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಧನಶ್ರೀ, ತಮ್ಮ ಬಗ್ಗೆಹರಿದಾಡುತ್ತಿರುವ ನೆಗೆಟಿವ್ ಕಾಮೆಂಟ್ ಗಳಿಗೆ ತಿರುಗೇಟು ನೀಡಿದ್ದಾರೆ. ನಾನು ಸುಮ್ಮನಿದ್ದೇನೆ ಎಂದು ನನ್ನ ಬಗ್ಗೆ ಬೇಕಾಬಿಟ್ಟಿ ಕಾಮೆಂಟ್ ಮಾಡಬೇಡಿ ಎಂದಿದ್ದಾರೆ.
ಕಳೆದ ಕೆಲವು ದಿನಗಳು ನನಗೆ ಮತ್ತು ನನ್ನ ಕುಟುಂಬಕ್ಕೆ ನಿಜಕ್ಕೂ ಕಠಿಣ ಸಮಯವಾಗಿತ್ತು. ಆದರೆ ನಿಜಕ್ಕೂ ಬೇಸರ ತರಿಸುವ ವಿಷಯವೇನೆಂದರೆ ನನ್ನ ಬಗ್ಗೆ ಸರಿಯಾಗಿ ಗೊತ್ತಿಲ್ಲದೇ, ವಿನಾಕಾರಣ ಮಾನಹಾನಿಕರ, ಅವಹೇಳನಕಾರೀ ಕಾಮೆಂಟ್, ಟ್ರೋಲ್ ಮಾಡುತ್ತಿರುವುದು. ನಾನು ಇಷ್ಟು ಹೆಸರು ಮಾಡಲು, ಗೌರವ ಸಂಪಾದಿಸಲು ಹಲವು ವರ್ಷಗಳ ಕಠಿಣ ಪರಿಶ್ರಮಪಟ್ಟಿದ್ದೇನೆ. ನಾನು ಮೌನವಾಗಿದ್ದೇನೆ ಎಂದರೆ ಅದು ನನ್ನ ದೌರ್ಬಲ್ಯವಲ್ಲ, ಬದಲಾಗಿ ಶಕ್ತಿ. ಆನ್ ಲೈನ್ ನಲ್ಲಿ ನೆಗೆಟಿವಿ ಬೇಗನೇ ಹರಡುತ್ತದೆ, ಆದರೆ ಅದು ನಮ್ಮನ್ನು ಮತ್ತಷ್ಟು ಪ್ರಬಲಗೊಳಿಸುತ್ತದೆ.
ನಾನು ನನ್ನ ಸತ್ಯದ ಹಾದಿಯಲ್ಲಿ ನಡೆಯುವುದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಮತ್ತು ಕೆಲಸವೊಂದೇ ನನ್ನ ಗುರಿಯಾಗಿರುತ್ತದೆ. ಸತ್ಯಕ್ಕೆ ಯಾವತ್ತೂ ಸಮಜಾಯಿಷಿಯ ಅಗತ್ಯವಿಲ್ಲ ಎಂದು ಧನಶ್ರೀ ಬರೆದುಕೊಂಡಿದ್ದಾರೆ.