Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್ ಕ್ರಿಕೆಟ್: ಕೊಹ್ಲಿ ತವರಲ್ಲಿ ರೋಹಿತ್ ಅಬ್ಬರ, ವಿಶ್ವಕಪ್ ನ ವೇಗದ ಶತಕ ದಾಖಲು

ಏಕದಿನ ವಿಶ್ವಕಪ್ ಕ್ರಿಕೆಟ್: ಕೊಹ್ಲಿ ತವರಲ್ಲಿ ರೋಹಿತ್ ಅಬ್ಬರ, ವಿಶ್ವಕಪ್ ನ ವೇಗದ ಶತಕ ದಾಖಲು
ನವದೆಹಲಿ , ಬುಧವಾರ, 11 ಅಕ್ಟೋಬರ್ 2023 (20:54 IST)
Photo Courtesy: Twitter
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಬ್ಬರದ ಶತಕ ಸಿಡಿಸಿದ್ದಾರೆ. ಟೀಂ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ವಿರಾಟ್ ಕೊಹ್ಲಿ ತವರು ದೆಹಲಿಯಲ್ಲಿ ಇಂದು ರೋಹಿತ್ ಹಿಟ್ ಮ್ಯಾನ್ ಅವತಾರ ತಾಳಿದ್ದರು. ಅಫ್ಘಾನಿಸ್ತಾನ ನೀಡಿದ 273 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ರೋಹಿತ್-ಇಶಾನ್ ಸ್ಪೋಟಕ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಇಬ್ಬರೂ 156 ರನ್ ಗಳ ಜೊತೆಯಾಟವಾಡಿದರು. ಈ ಪೈಕಿ ಇಶಾನ್ ಕೊಂಚ ನಿಧಾನಿಯಾದರು. ಅಂತಿಮವಾಗಿ 47 ಎಸೆತಗಳಲ್ಲಿ 47 ರನ್ ಗಳಿಸಿ ಔಟಾದರು.

ಆದರೆ ಇಡೀ ಇನಿಂಗ್ಸ್ ಆವರಿಸಿದ್ದು ರೋಹಿತ್. ಎಂದಿನಂತೆ ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸಿದ ರೋಹಿತ್ 63 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಏಕದಿನ ವಿಶ್ವಕಪ್ ನಲ್ಲಿ ಭಾರತದ ಪರ ವೇಗದ ಶತಕ ದಾಖಲಿಸಿದ ದಾಖಲೆ ಮಾಡಿದರು. ಒಟ್ಟು 84 ಎಸೆತ ಎದುರಿಸಿದ ಅವರು 5 ಸಿಕ್ಸರ್ 16 ಬೌಂಡರಿ ಸಹಿತ 131 ರನ್ ಗಳಿಸಿ ಔಟಾದರು.

ರೋಹಿತ್ ದಾಖಲೆಗಳು: ಹಿಟ್ ಮ್ಯಾನ್ ರೋಹಿತ್ ಇಂದು ವಿಶ್ವಕಪ್ ನಲ್ಲಿ ಭಾರತದ ಪರ ವೇಗದ ಶತಕ ಜೊತೆಗೆ ಇನ್ನಷ್ಟು ದಾಖಲೆ ತಮ್ಮದಾಗಿಸಿಕೊಂಡರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ಸಿಕ್ಸರ್, ವಿಶ್ವಕಪ್ ನಲ್ಲಿ ಭಾರತೀಯ ಆಟಗಾರನೊಬ್ಬನ ಗರಿಷ್ಠ ಸಿಕ್ಸರ್, ವಿಶ್ವಕಪ್ ನಲ್ಲಿ ಭಾರತದ  ಪರ 7 ನೇ ಶತಕ ದಾಖಲೆಯೂ ರೋಹಿತ್ ಪಾಲಾಯಿತು.

ಇಶಾನ್ ಔಟಾದ ಬಳಿಕ ಕೊಹ್ಲಿ ಕ್ರೀಸ್ ಗೆ ಬರುತ್ತಿದ್ದಂತೇ ಪ್ರೇಕ್ಷಕರ ಹರ್ಷೋದ್ಗಾರ ಮೇರೆ ಮೀರಿತ್ತು. ಎರಡನೇ ವಿಕೆಟ್ ಗೆ ಕೊಹ್ಲಿ-ರೋಹಿತ್ 49 ರನ್ ಒಟ್ಟುಗೂಡಿಸಿದಾಗ ರೋಹಿತ್ ಔಟಾದರು. ತವರಿನ ಪ್ರೇಕ್ಷಕರ ಬೆಂಬಲದಲ್ಲಿ ಮಿಂದೆದ್ದ ಕೊಹ್ಲಿ 56 ಎಸೆತಗಳಿಂದ 55 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 25 ರನ್ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ 35 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿ ಗೆಲುವು ತನ್ನದಾಗಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ಕೊಹ್ಲಿ-ನವೀನ್ ಪ್ಯಾಚ್ ಅಪ್!