Publish Date: Thu, 19 Oct 2023 (09:00 IST)
Updated Date: Thu, 19 Oct 2023 (09:13 IST)
ಪುಣೆ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಅತಿಥೇಯ ಟೀಂ ಇಂಡಿಯಾ ತನ್ನ ನಾಲ್ಕನೇ ಪಂದ್ಯವಾಡಲಿದೆ. ಭಾರತಕ್ಕೆ ಹಲವು ಬಾರಿ ಅಚ್ಚರಿಯ ಸೋಲು ನೀಡಿರುವ ಬಾಂಗ್ಲಾದೇಶ ವಿರುದ್ಧ ಪಂದ್ಯವಾಡಲಿದೆ.
2007 ರ ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತ ಬಳಿಕ ಟೀಂ ಇಂಡಿಯಾ ಎಚ್ಚರಿಕೆಯಿಂದಿರಬೇಕಿದೆ. ಅದಾದ ಬಳಿಕ ಇತ್ತೀಚೆಗೆ ಏಷ್ಯಾ ಕಪ್ ನಲ್ಲಿ, ಅದಕ್ಕೆ ಮೊದಲು ನಡೆದಿದ್ದ ಏಕದಿನ ಸರಣಿಯಲ್ಲೂ ಬಾಂಗ್ಲಾದೇಶ ವಿರುದ್ಧ ಸೋಲು ಅನುಭವಿಸಿತ್ತು. ಆದರೆ ಪ್ರಸಕ್ತ ಭಾರತ ತಂಡ ಅದ್ಭುತ ಫಾರ್ಮ್ ನಲ್ಲಿದ್ದು, ಗೆಲ್ಲುವ ವಿಶ್ವಾಸದಲ್ಲಿದೆ.
ಇತ್ತ ಬಾಂಗ್ಲಾದೇಶ ಆಡಿದ ಮೂರು ಪಂದ್ಯಗಳ ಪೈಕಿ ಗೆದ್ದಿದ್ದು ಕೇವಲ ಒಂದು ಪಂದ್ಯದಲ್ಲಿ. ಭಾರತದ ವಿರುದ್ಧ ಸದಾ ಉತ್ತಮವಾಗಿ ಆಡುವ ಶಕೀಬ್ ಅಲ್ ಹಸನ್ ತಂಡದ ಶಕ್ತಿಯಾಗಿದ್ದಾರೆ. ಮೆಹದಿ ಹಸನ್ ಕೂಡಾ ಭಾರತದ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಪೈಪೋಟಿ ನಿರೀಕ್ಷಿಸಬಹುದು. ಮಧ‍್ಯಾಹ್ನ 2 ಗಂಟೆಗೆ ಪುಣೆ ಮೈದಾನದಲ್ಲಿ ಪಂದ್ಯ ಆರಂಭವಾಗಲಿದೆ.