ಚೆನ್ನೈ: ಭಾರತ ಕ್ರಿಕೆಟ್‌ನಲ್ಲಿನ ಸೂಪರ್ ಸ್ಟಾರ್ ಸಂಸ್ಕೃತಿಯ ವಿರುದ್ಧ ಮತ್ತೊಬ್ಬ ದಿಗ್ಗಜ ಆಟಗಾರ ಧ್ವನಿಯೆತ್ತಿದ್ದಾರೆ. ಈ ನಿಟ್ಟಿನಲ್ಲಿ ಅಭಿಮಾನಿಗಳಿಗೆ ಕಿವಿಮಾತು ಹೇಳಿರುವ ಅವರು, ಆಟಗಾರರನ್ನು ಸಾಮ್ಯಾನ ಆಟಗಾರರಂತೆ ನೋಡಿ, ಅಟ್ಟಕ್ಕೇರಿಸಬೇಡಿ ಎಂದು ಸಲಹೆ ನೀಡಿದ್ದಾರೆ.
ಈಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ರವಿಚಂದ್ರನ್ ಅಶ್ವಿನ್ ಅವರು ಭಾರತ ತಂಡದಲ್ಲಿರುವ ಸೂಪರ್ ಸ್ಟಾರ್ ಸಂಸ್ಕೃತಿಯನ್ನು ನೇರವಾಗಿ ಟೀಕಿಸಿದ್ದಾರೆ.
ಕ್ರಿಕೆಟಿಗರನ್ನು ದೇವಮಾನವರ ರೀತಿ ಆರಾಧಿಸಬೇಡಿ. ಅವರನ್ನು ಆಟಗಾರರಾಗಿ ಮಾತ್ರ ಪೋಷಣೆ ಮಾಡಿ. ಆಗ ಮಾತ್ರ ಸಾಧನೆ ಅವರ ತಲೆಗೇರದೇ ಸಾಮಾನ್ಯರಂತೆ ಉಳಿಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಭಾರತ ತಂಡದಲ್ಲಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶತಕ ಹೊಡೆದಾಗ ಅದನ್ನೇನೂ ದೊಡ್ಡದು ಮಾಡಬೇಕಿಲ್ಲ. ಮಾಮೂಲಿ ಸಾಧನೆಯಂತೆ ನೋಡಬೇಕು. ಅವರು ಕ್ರಿಕೆಟ್ ಬದುಕಿನಲ್ಲಿ ಈಗಾಗಲೇ ಸಾಕಷ್ಟು ಸಾಧಿಸಿದ್ದಾರೆ. ಅತಿರೇಕ ಮಾಡುವುದರಿಂದ ಅವರ ಆಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.
ಕ್ರಿಕೆಟ್ ಅನ್ನು ಜನರು ನೋಡುವ ದೃಷ್ಟಿಕೋನ ಬದಲಾಗಬೇಕು. ಯಾರೂ ಸೂಪರ್ ಸ್ಟಾರ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಬಾರದು. ಕೆಲವೇ ಆಟಗಾರರನ್ನು ತಂಡದೊಳಗೆ ಸೂಪರ್ ಸೆಲೆಬ್ರಿಟಿಗಳ ರೀತಿ ಕಾಣುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಕ್ರಿಎಕಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಇತ್ತೀಚೆಗೆ ತಂಡದಲ್ಲಿ ಸೂಪರ್ ಸ್ಟಾರ್ ಸಂಸ್ಕೃತಿ ವಿರುದ್ಧ ಮಾತನಾಡಿದ್ದರು. ಅವರೂ ಕೂಡ ತಂಡದಲ್ಲಿ ಸಾಂಘಿಕ ಪ್ರದರ್ಶನದ ಕಡೆ ಒತ್ತು ನೀಡಬೇಕೇ ಹೊರತು, ವೈಯಕ್ತಿಕ ಸಾಧನೆ ಕಡೆ ಹೆಚ್ಚು ಗಮನ ಇರಬಾರದು ಎಂದು ಪರೋಕ್ಷವಾಗಿ ವಿರಾಟ್ ಮತ್ತು ರೋಹಿತ್ ವಿರುದ್ಧ ಮಾತನಾಡಿದ್ದರು.