ಬೆಂಗಳೂರು: ಬೆಳ್ಳಂ ಬೆಳಿಗ್ಗೆಯೇ ಬೆಂಗಳೂರಿಗರಿಗೆ ಮೆಟ್ರೋ ಶಾಕ್ ಸಿಕ್ಕಿದೆ. ನಮ್ಮ ಮೆಟ್ರೋ ಪ್ರಯಾಣ ದರ ಶೇಕಡಾ 5 ಏರಿಕೆಯಾಗಲಿದೆ.
ಒಂದು ವರ್ಷದ ಹಿಂದಷ್ಟೇ ಮೆಟ್ರೋ ಪ್ರಯಾಣ ದರ 71.5 ರಷ್ಟು ಏರಿಕೆಯಾಗಿತ್ತು. ಆಗ ಪ್ರಯಾಣಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮತ್ತೆ ಒಂದೇ ವರ್ಷ ಕಳೆಯುವಷ್ಟರಲ್ಲಿ ಮತ್ತೆ ಮೆಟ್ರೋ ಪ್ರಯಾಣ ದರ ಏರಿಕೆಯಾಗುತ್ತಿದೆ.
ಈ ಬಾರಿ ಶೇಕಡಾ 5 ರಷ್ಟು ಏರಿಕೆಯಾಗಲಿದೆ. ಕಳೆದ ವರ್ಷವೇ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಮಿತಿ ಪ್ರತೀ ವರ್ಷ 5 ಶೇಕಡಾದಷ್ಟು ಹೆಚ್ಚಳ ಮಾಡಲು ಅನುಮತಿ ನೀಡಿತ್ತು. ಅದರಂತೆ ಈಗ ಒಂದು ವರ್ಷ ಕಳೆಯುವಷ್ಟರಲ್ಲಿ 5 ಶೇಕಡಾ ಹೆಚ್ಚಳವಾಗುತ್ತಿದೆ.
ಇದರಿಂದಾಗಿ ಈಗ ಮೆಟ್ರೋ ಪ್ರಯಾಣ ದರ ಕನಿಷ್ಠ 1 ರೂ.ಗಳಿಂದ 5 ರೂ.ಗಳವರೆಗೆ ಏರಿಕೆಯಾಗಲಿದೆ. ಫೆಬ್ರವರಿ 9 ರಿಂದಲೇ ಈ ಹೊಸ ದರ ಜಾರಿಗೆ ಬರಲಿದೆ. ಕನಿಷ್ಠ ದರ 10 ರೂ. ಇರುವಲ್ಲಿ 11 ರೂ.ಗೆ ಏರಿಕೆಯಾಗಲಿದೆ. 90 ರೂ. ದರ ಇರುವಲ್ಲಿ 95 ರೂ.ಗಳಾಗಲಿವೆ.