ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿ ಮತ್ತೊಮ್ಮೆ ಸ್ಟಾರ್ ಬ್ಯಾಟಿಗ ಬಾಬರ್ ಅಜಮ್ ರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಪಾಕ್ ತಂಡ ಕಳಪೆ ಪ್ರದರ್ಶನ ಗಮನಿಸಿ ಮತ್ತೆ ಬಾಬರ್ ಗೆ ಪಟ್ಟ ಕಟ್ಟಲಾಗಿದೆ.
ಭಾರತದಲ್ಲಿ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಾಬರ್ ಅಜಮ್ ರನ್ನು ನಾಯಕತ್ವದಿಂದ ಕಿತ್ತು ಹಾಕಿತ್ತು. ಈ ವೇಳೆ ತಂಡದಲ್ಲಿ ಆಂತರಿಕ ಕಲಹವೂ ಇತ್ತು ಎನ್ನಲಾಗಿದೆ.
ಇದಾದ ಬಳಿಕ ಟಿ20 ಮತ್ತು ಏಕದಿನ ತಂಡಕ್ಕೆ ವೇಗಿ ಶಾಹಿನ್ ಅಫ್ರಿದಿ ಮತ್ತು ಟೆಸ್ಟ್ ತಂಡಕ್ಕೆ ಶಾನ್ ಮಸೂದ್ ರನ್ನು ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಇವರಿಬ್ಬರ ನಾಯಕತ್ವದಲ್ಲಿ ಪಾಕ್ ತಂಡ ಹೇಳಿಕೊಳ್ಳುವಂತಹ ಸಾಧನೆಯನ್ನೇನೂ ಮಾಡಲಿಲ್ಲ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ 1-4 ಅಂತರದಿಂದ ಪಾಕ್ ಸೋತಿತ್ತು. ಟೆಸ್ಟ್ ನಲ್ಲೂ ಆಸ್ಟ್ರೇಲಿಯಾ ವಿರುದ್ಧ 0-3 ಅಂತರದಿಂದ ಸೋತಿತ್ತು. ಹೀಗಾಗಿ ಮತ್ತೆ ಬಾಬರ್ ಗೇ ಮಣೆ ಹಾಕಲಾಗಿದೆ.
ಮುಂಬರುವ ಟಿ20 ವಿಶ್ವಕಪ್ ನಲ್ಲಿ ಪಾಕ್ ತಂಡವನ್ನು ಬಾಬರ್ ಅಜಮ್ ಮುನ್ನಡೆಸಲಿದ್ದಾರೆ. ಇದುವರೆಗೆ ಪಾಕಿಸ್ತಾನ ಪರ ಬಾಬರ್ 133 ಪಂದ್ಯಗಳಲ್ಲಿ ನಾಯಕರಾಗಿದ್ದು ಈ ಪೈಕಿ 78 ಗೆಲುವು, 43 ಸೋಲು ಕಂಡಿದ್ದಾರೆ.