ಅಬುದಾಬಿ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ನಿನ್ನೆಯ ಒಮನ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ಅಕ್ಷರ್ ಪಟೇಲ್ ಆಡುವಾಗ ಗಾಯಗೊಂಡಿದ್ದರು. ಇದೀಗ ಅವರು ನಾಳೆಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡ್ತಾರಾ ಎನ್ನುವ ಅನುಮಾನ ಶುರುವಾಗಿದೆ.
ಒಮನ್ ಇನಿಂಗ್ಸ್ ನ 15 ನೇ ಓವರ್ ನಲ್ಲಿ ನಿನ್ನೆ ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಅಕ್ಷರ್ ಪಟೇಲ್ ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಆಯತಪ್ಪಿ ಬಿದ್ದ ಅವರು ತಲೆಗೆ ಏಟು ಮಾಡಿಕೊಂಡಿದ್ದರು. ಇದಾದ ಬಳಿಕ ಅವರನ್ನು ಡ್ರೆಸ್ಸಿಂಗ್ ರೂಂಗೆ ಕರೆದೊಯ್ಯಲಾಯಿತು.
ಹೀಗಾಗಿ ನಂತರ ಅವರು ಫೀಲ್ಡಿಂಗ್ ಗೆ ಇಳಿಯಲಿಲ್ಲ. ಅಕ್ಷರ್ ಪಟೇಲ್ ಟೀಂ ಇಂಡಿಯಾಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ನೆರವಾಗುತ್ತಾರೆ. ಬೌಲಿಂಗ್ ನಲ್ಲೂ ಕೀ ಆಟಗಾರ. ಹೀಗಿರುವಾಗ ಅವರು ಗೈರಾದರೆ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಭಾರತಕ್ಕೆ ದೊಡ್ಡ ಹೊಡೆತವಾಗಲಿದೆ.
ಈ ನಡುವೆ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮಾಧ್ಯಮಗಳಿಗೆ ಅಕ್ಸರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಅಕ್ಷರ್ ಆರೋಗ್ಯವಾಗಿದ್ದಾರೆ. ನಾನು ಆತನನ್ನು ಗಮನಿಸಿದಂತೆ ಫಿಟ್ ಆಗಿದ್ದು ಮುಂದಿನ ಪಂದ್ಯ ಆಡಬಹುದು ಎಂದು ಗುಡ್ ನ್ಯೂಸ್ ನೀಡಿದ್ದಾರೆ.